ಚಾಮರಾಜನಗರ:ಮೂವರು ಮಾಜಿ ಶಾಸಕರು ಟಿಕೆಟ್ ಆಕಾಂಕ್ಷಿಯಾಗಿದ್ದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಎ. ಆರ್. ಕೃಷ್ಣಮೂರ್ತಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ಮಾಜಿ ಶಾಸಕರಾಗಿದ್ದರು. ಎ. ಆರ್. ಕೆ ಜೊತೆಗೆ ಮಾಜಿ ಶಾಸಕ ಜಯಣ್ಣ ಮತ್ತೋರ್ವ ಮಾಜಿ ಶಾಸಕ ಬಾಲರಾಜು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅಳೆದು-ತೂಗಿ ಕೊನೆಗೂ ಕೃಷ್ಣಮೂರ್ತಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಕೊಳ್ಳೇಗಾಲ ಕ್ಷೇತ್ರದ ಟಿಕೆಟ್ ಘೋಷಣೆ ಮಾಡುವ ಮೂಲಕ ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಕೈ ಟಿಕೆಟ್ ಫೈನಲ್ ಆದಂತಾಗಿದೆ. ಮೊದಲ ಪಟ್ಟಿಯಲ್ಲಿ ಚಾಮರಾಜನಗರದಿಂದ ಹಾಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ, ಹನೂರುನಿಂದ ಹಾಲಿ ಶಾಸಕ ಆರ್. ನರೇಂದ್ರ ಹಾಗೂ ಗುಂಡ್ಲುಪೇಟೆಯಿಂದ ಗಣೇಶ್ ಪ್ರಸಾದ್ ಅವರನ್ನು ಘೋಷಣೆ ಮಾಡಲಾಗಿತ್ತು.
ಜೆಡಿಎಸ್ ಟಿಕೆಟ್ ಕೂಡ ಕಗ್ಗಂಟು: ಹನೂರು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಟಿಕೆಟ್ ಮಾತ್ರ ಜೆಡಿಎಸ್ ಘೋಷಣೆ ಮಾಡಿದ್ದು, ಚಾಮರಾಜನಗರ, ಕೊಳ್ಳೇಗಾಲದ ಅಭ್ಯರ್ಥಿ ಇನ್ನೂ ಫೈನಲ್ ಆಗಿಲ್ಲ. ಟಕೆಟ್ ಕೈ ತಪ್ಪಿದವರು ಕದ ತಟ್ಟಿದ್ದರೇ ಅವರಿಗೆ ಟಿಕೆಟ್ ಕೊಡುವ ಲೆಕ್ಕಾಚಾರವೂ ಅಡಗಿದ್ದು, ಜೆಡಿಎಸ್ ಅಭ್ಯರ್ಥಿಗಳ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ಟಿಕೆಕ್ ನಿರೀಕ್ಷೆಯಲ್ಲಿ ಬಿಜೆಪಿ ಮುಖಂಡನಿಂದ ಪ್ರಚಾರ:ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಸಿ. ಎಸ್. ನಿರಂಜನ ಕುಮಾರ್ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಇದರೊಟ್ಟಿಗೆ, ತಮಗೆ ಟಿಕೆಟ್ ಸಿಗುವ ಭರವಸೆಯಲ್ಲಿ ಬಿಜೆಪಿ ಮುಖಂಡ ಎಂ. ಪಿ. ಸುನೀಲ್ ಕೂಡ ಇಂದಿನಿಂದ ಪ್ರಚಾರ ಆರಂಭಿಸಿ ಗಮನ ಸೆಳೆದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಪಾರ್ವತಿ ಬೆಟ್ಟದಿಂದ ಪ್ರಚಾರ ಆರಂಭಿಸಿರುವುದು ಬಂಡಾಯದ ಮುನ್ಸೂಚನೆ ಆಗಿದೆ. ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ. ಆದರೆ, ಕೆಲ ದಿನಗಳ ಹಿಂದೆಯಷ್ಟೇ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸುನೀಲ್ ಅವರ ಹೆಸರು ಕೂಡ ಪ್ರಸ್ತಾಪ ಆಗಿದ್ದು ಬಿಜೆಪಿ ಪಡೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:ಕ್ಷೇತ್ರ ಉಳಿಸಿಕೊಂಡ ವಿನಯ್: ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಕುಲಕರ್ಣಿ ಫೈನಲ್