ಚಾಮರಾಜನಗರ:ಕಳೆದೆರಡು ದಿನಗಳಿಂದ ಗುಂಡ್ಲುಪೇಟೆ ಮಡಹಳ್ಳಿ ಕಲ್ಲು ಕ್ವಾರಿ ಕುಸಿತ ಪ್ರಕರಣದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯ ಮುಕ್ತಾಯಗೊಂಡಿದ್ದು, ಇಂದು ಒಂದು ಮೃತದೇಹವನ್ನು ಹೊರ ತೆಗೆಯಲಾಗಿದೆ.
ನಿನ್ನೆ ಅಜೀಂ ಉಲ್ಲಾ @ ಬಬ್ಲು, ಮಿರಾಜ್ ಎಂಬುವವರ ಮೃತದೇಹ ಹೊರ ತೆಗೆಯಲಾಗಿತ್ತು. ಇಂದು ಕೊನೆಯದಾಗಿ ಸರ್ಫರಾಜ್ ಮೃತದೇಹ ಹೊರತೆಗೆಯವ ಮೂಲಕ ರಕ್ಷಣಾ ಕಾರ್ಯ ಮುಕ್ತಾಯಗೊಳಿಸಲಾಗಿದೆ.
25 ಎನ್ಡಿಆರ್ಎಫ್, 25 ಎಸ್ಡಿಆರ್ಎಫ್ ಹಾಗೂ 50 ಅಗ್ನಿಶಾಮಕ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಬಂಡೆಗಳಡಿ ಸಿಲುಕಿದ್ದ ಮೂವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಕ್ವಾರಿಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದ್ದು, ಮೂವರ ವಿರುದ್ಧ ಎಫ್ಐಆರ್ ದಾಖಲಿಸಿ ಒಬ್ಬನನ್ನು ಬಂಧಿಸಲಾಗಿದೆ.
ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿರುವ ಅಗ್ನಿಶಾಮಕ ದಳದ ಮೈಸೂರು ವಿಭಾಗದ ಮುಖ್ಯಾಧಿಕಾರಿ ಜಯರಾಮಯ್ಯ, ಸದ್ಯ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಇದುವರೆಗೆ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮಣ್ಣಿನಲ್ಲಿ ಸಿಲುಕಿರುವ ಟ್ರ್ಯಾಕ್ಟರ್, ಟಿಪ್ಪರ್, ಜೆಸಿಬಿಗಳನ್ನು ಹಾಗೆಯೇ ಬಿಡಲಾಗಿದೆ. ಜಿಲ್ಲಾಡಳಿತವು ಈ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಕ್ವಾರಿ ಗುಡ್ಡ ಕುಸಿತ ಪ್ರಕರಣ: ಒಂದು ಶವ ಪತ್ತೆ, ಇನ್ನು ಮೂವರು ಸಿಲುಕಿರುವ ಶಂಕೆ