ಚಾಮರಾಜನಗರ: ವೆಂಟಿಲೇಟರ್ನಲ್ಲಿದ್ದ ಕೊರೊನಾ ಸೋಂಕಿತ ಮಹಿಳೆಯನ್ನು ಮೃತಪಟ್ಟಿದ್ದಾರೆ ಎಂದು ಕುಟುಂಬಕ್ಕೆ ತಿಳಿಸಿ ಕೊನೆಗೆ ತಪ್ಪು ಮಾಹಿತಿ ಎಂದು ಜಾರಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಚಾಮರಾಜನಗರದಲ್ಲಿ ಮತ್ತೊಂದು ಎಡವಟ್ಟು: ಬದುಕಿದ್ದ ಸೋಂಕಿತೆಯನ್ನೇ ಸತ್ತಿದ್ದಾರೆ ಎಂದ ಸಿಬ್ಬಂದಿ
ಆಕ್ಸಿಜನ್ ಕೊರತೆಯಿಂದ ನಿನ್ನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಾಲು ಸಾಲು ಮಂದಿ ಪ್ರಾಣಬಿಟ್ಟ ಪ್ರಕರಣ ಮಾಸುವ ಮುನ್ನವೇ ಜಿಲ್ಲಾಸ್ಪತ್ರೆಯ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ.
ತಾಲೂಕಿನ ಲಿಂಗಣಪುರ ಗ್ರಾಮದ 59 ವರ್ಷದ ಮಹಿಳೆಯೊಬ್ಬರು ಜಿಲ್ಲಾಸ್ಪತ್ರೆಗೆ ದಾಖಲಾಗಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕಣ್ತಪ್ಪಿನಿಂದಾಗಿ ಬದುಕಿದ್ದವರನ್ನು ದಾಖಲೆಯಲ್ಲಿ ಸಾಯಿಸಿ ಮನೆಯವರಿಗೆ ಫೋನ್ ಮಾಡಿದ್ದಾರೆ. ಶವ ಗುರುತಿಸುವಾಗ ತನ್ನ ತಾಯಿ ಅಲ್ಲದ್ದನ್ನು ಕಂಡು ಹೌಹಾರಿದ ಪುತ್ರ ಗುರುಮಲ್ಲು ವಾರ್ಡ್ಗೆ ತೆರಳಿ ಪರಿಶೀಲಿಸಿದಾಗ ತಾಯಿ ವೆಂಟಿಲೇಟರ್ನಲ್ಲಿರುವುದು ಗೊತ್ತಾಗಿದೆ.
ಇತ್ತ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಸಿದ್ಧತೆ ನಡೆಸಿ ಗುಂಡಿಯನ್ನು ತೆಗೆಸಿ ಕುಟುಂಬದವರು ರೋಧಿಸುತ್ತಿದ್ದಾಗ ತಾಯಿ ಬದುಕಿರುವ ವಿಚಾರವನ್ನು ಮನೆಯವರಿಗೆ ಗುರುಮಲ್ಲು ತಿಳಿಸಿ ನಿಟ್ಟಿಸಿರು ಬಿಟ್ಟಿದ್ದಾರೆ. ಒಂದಾದ ಮೇಲೊಂದರಂತೆ ಚಾಮರಾಜನಗರ ಜಿಲ್ಲಾಸ್ಪತ್ರೆಯ ಹುಳುಕುಗಳು ಹೊರಬರುತ್ತಿದ್ದು ಅವ್ಯವಸ್ಥೆಗೆ ಕೊನೆ ಎಂದು ಎಂಬ ಪ್ರಶ್ನೆ ಮೂಡಿದೆ.