ಚಾಮರಾಜನಗರ:ಎರಡನೇ ಹೆಂಡತಿಗೆ ಮಕ್ಕಳಾಗಲಿಲ್ಲವೆಂಬ ಕೋಪಕ್ಕೆ ವಿಚ್ಛೇದಿತ ಪತ್ನಿಯ ಮಗುವನ್ನು ಅಪಹರಿಸಿ ಕೊಂದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿಯಲ್ಲಿ ನಡೆದಿದೆ.
2ನೇ ಹೆಂಡತಿಗೆ ಮಕ್ಕಳಾಗದ್ದಕ್ಕೆ ಕೋಪ: ವಿಚ್ಛೇದಿತ ಪತ್ನಿಯ ಮಗುವನ್ನು ಕೊಂದ ಪತಿ..! ಮಹಾದೇವಸ್ವಾಮಿ ಹಾಗೂ ಗೌರಮ್ಮ ದಂಪತಿಯ ಪುತ್ರಿ ಮಹಾಲಕ್ಷ್ಮಿ (05) ಮೃತ ಬಾಲಕಿ. ಮಹಾಲಕ್ಷ್ಮಿಯ ತಾಯಿ ಗೌರಮ್ಮಳಿಗೆ ಮಹೇಶ್ ಮೊದಲನೇ ಪತಿಯಾಗಿದ್ದು, ಕೆಲ ವರ್ಷಗಳ ಹಿಂದೆ ವಿಚ್ಛೇದನವಾಗಿ ರತ್ನಮ್ಮ ಎಂಬಾಕೆಯನ್ನು ಎರಡನೇ ಮದುವೆಯಾಗಿರುತ್ತಾನೆ. ಗೌರಮ್ಮ ಮಹಾದೇವಸ್ವಾಮಿ ಎಂಬಾತನೊಂದಿಗೆ ಎರಡನೇ ಸಂಸಾರ ಮಾಡಿಕೊಂಡಿದ್ದಳು.
ಆದರೆ, ರತ್ಮಮ್ಮನಿಗೆ ಮಕ್ಕಳಾಗದಿರುವ ಹೊಟ್ಟೆಕಿಚ್ಚು ಜೊತೆಗೆ ಆಗಾಗ್ಗೆ ಮಹಾದೇವಸ್ವಾಮಿ ಕುಡಿದು ರೇಗಿಸುತ್ತಿದ್ದ ಪರಿಣಾಮ ರೋಸಿಹೋದ ಮಹೇಶ್ ಹಾಗೂ ರತ್ನಮ್ಮ ಸೋಮವಾರ ಮಗುವನ್ನು ಅಪಹರಿಸಿ ಉಸಿರುಗಟ್ಟಿಸಿ ಕೊಂದು ಸಿಮೆಂಟ್ ಚೀಲದಲ್ಲಿ ತುರುಕಿ ದೇವರ ಮನೆಯಲ್ಲಿಟ್ಟಿದ್ದರು ಎಂದು ತಿಳಿದು ಬಂದಿದೆ.
ಮಗು ಕಾಣೆಯಾಗಿರುವ ಕುರಿತು ತೆರಕಣಾಂಬಿ ಠಾಣೆಯಲ್ಲಿ ಗೌರಮ್ಮ ದೂರು ನೀಡಿದಾಗ ಆಕೆಯ ಮೊದಲ ಪತಿ ಮಹೇಶ್ ಮೇಲೆ ಅನುಮಾನಗೊಂಡ ಪೊಲೀಸರು ಮನೆ ಶೋಧಿಸಿದರು. ಆಗ ಮಗು ಅಪಹರಿಸಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.
ಸದ್ಯ, ಮಹೇಶ್ ಹಾಗೂ ರತ್ನಮ್ಮ ಇಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.