ಕರ್ನಾಟಕ

karnataka

ETV Bharat / state

ಬಂಡೀಪುರದಲ್ಲೊಂದು ದಿ ಎಲಿಫೆಂಟ್ ವಿಸ್ಪರರ್ಸ್ ಕಥೆ.. ಸ್ವಂತ ಮಗುವಿನ ರೀತಿ ಮರಿಯಾನೆ ಸಲಹುತ್ತಿರುವ ಕಾವಾಡಿ ದಂಪತಿ - ಈಟಿವಿ ಭಾರತ್ ಕನ್ನಡ ಸುದ್ದಿ

ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿ ತಾಯಿಯಿಂದ ಬೇರ್ಪಟ್ಟಿರುವ ಮರಿಆನೆಯನ್ನು ಕಾವಾಡಿ ದಂಪತಿ ತಮ್ಮ ಸ್ವಂತ ಮಗುವಿನಂತೆ ಸಾಕಿ ಸಲಹುತ್ತಿದ್ದಾರೆ.

ಮರಿಯಾನೆ ಸಲಹುತ್ತಿರುವ ಕಾವಾಡಿ ದಂಪತಿ
ಮರಿಯಾನೆ ಸಲಹುತ್ತಿರುವ ಕಾವಾಡಿ ದಂಪತಿ

By

Published : Jul 20, 2023, 4:36 PM IST

Updated : Jul 20, 2023, 7:03 PM IST

ಮರಿಯಾನೆ ಸಲಹುತ್ತಿರುವ ಕಾವಾಡಿ ದಂಪತಿ

ಚಾಮರಾಜನಗರ :ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರದಲ್ಲಿ ವಿಶ್ವದ ಗಮನ ಸೆಳೆದ ಬೆಳ್ಳಿ-ಬೊಮ್ಮನ್ ಬಂಡೀಪುರದಲ್ಲೂ ಇದ್ದಾರೆ. ಅಂದರೆ, ಅವರ ರೀತಿಯಲ್ಲೇ ಕಾವಾಡಿ ದಂಪತಿ ಸ್ವಂತ ಮಗುವಿನಂತೆ ತಾಯಿಂದ ಬೇರ್ಪಟ್ಟಿರುವ ಆನೆ ಮರಿಯೊಂದನ್ನು ಸಾಕಿ ಸಲಹುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಂಪುರ ಆನೆ ಶಿಬಿರದ ಕಾವಾಡಿ ರಾಜು ಮತ್ತು ರಮ್ಯಾಗೆ ‘ವೇದಾ’ ಮೊದಲನೇ ಹೆಣ್ಣು ಮಗಳು. ಈ ವೇದಾ ಮತ್ಯಾರೂ ಅಲ್ಲ. ಕಳೆದ ಏಳು ತಿಂಗಳ ಹಿಂದೆ ನುಗು ವಲಯದ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 7 ತಿಂಗಳ ಹೆಣ್ಣು ಆನೆಮರಿ. ಕೆಲವೇ ವರ್ಷಗಳ ಹಿಂದೆ ವಿವಾಹವಾಗಿರುವ ರಾಜು ಮತ್ತು ರಮ್ಯಾ ಅವರ ಮಡಿಲು ಸೇರಿರುವ ವೇದಾಗೆ ಮೊದಲ ಮಗುವಿನ ಪಾಲನೆಯ ಅನುಭವ ನೀಡುತ್ತಿದ್ದಾಳೆ.

ಮರಿಯಾನೆ ಸಲಹುತ್ತಿರುವ ಕಾವಾಡಿ ದಂಪತಿ

ವೇದಾ ಎಂದು ಮರಿ ಆನೆಗೆ ಹೆಸರು ನಾಮಕರಣ:ಏಳು ತಿಂಗಳ ಹಿಂದೆ ನುಗು ಅರಣ್ಯ ಪ್ರದೇಶದಲ್ಲಿ ಈ ಆನೆಮರಿ ಕಾಡಿನಲ್ಲಿ ತಾಯಿಯಿಂದ ಬೇರ್ಪಟ್ಟಾಗ 14 ದಿನಗಳ ಮರಿ. ನಿಂತ ಜಾಗದಲ್ಲೇ ನಿಂತು ಕಾದು ಕಾದು ಸುಸ್ತಾದರೂ ಅದರ ಅಮ್ಮ ಬರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಆನೆ ಮರಿಯನ್ನು ರಕ್ಷಣೆ ಮಾಡಿತು. ಮೈಸೂರು ಮೃಗಾಲಯಕ್ಕೆ ಕಳುಹಿಸಲು ನಿರ್ಧರಿಸಿ ಕೊನೆಗೆ ರಾಂಪುರ ಶಿಬಿರಕ್ಕೆ ಕರೆತರಲಾಯಿತು. ಈ ವೇಳೆ ವೇದಾ ಎಂಬ ಹೆಸರನ್ನು ನಾಮಕರಣ ಮಾಡಲಾಯಿತು.

ಮರಿಯಾನೆ ಸಲಹುತ್ತಿರುವ ಕಾವಾಡಿ ದಂಪತಿ

ವೇದಾ ಆರಂಭಿಕ ದಿನಗಳಲ್ಲಿ ಬೆಚ್ಚುತ್ತಿದ್ದಳು. ಫಾರೆಸ್ಟರ್ ಜಗದೀಶ್ ನ್ಯಾಮಗೌಡರ್ ಪಾಲನೆ ಮಾಡಿದರು. ಕೆಲವು ವಾರಗಳ ನಂತರ ರಾಜು ಮತ್ತು ರಮ್ಯಾ ಮಡಿಲಿಗೆ ವೇದಾಳನ್ನು ಇಡಲಾಯಿತು. ಅಲ್ಲಿಂದ ಆನೆ ಮರಿಯೊಂದಿಗಿನ ಸಂಬಂಧ ಚಿಗುರೊಡೆಯಿತು.

ಮನೆಯಂಗಳದ ಮಗುವಾಗಿರುವ ಮರಿ ಆನೆ ಈ ವೇದಾ:ತಮಿಳುನಾಡಿನ ತೆಪ್ಪಕಾಡಿನ ಬೆಳ್ಳಿ-ಬೊಮ್ಮನ್ ‘ದಿ ಎಲಿಫೆಂಟ್ ವಿಸ್ಪರರ್ಸ್’ನ ಕಿರುಚಿತ್ರದಲ್ಲಿ ಆನೆಮರಿ ಜತೆ ಹೊಂದಿರುವ ಭಾವಾನುಬಂಧ ಇಲ್ಲೂ ಏರ್ಪಟ್ಟಿತು. ರಾಜು ಮತ್ತು ರಮ್ಯಾ ಅವರು ವೇದಾಳನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಗ್ಲೂಕೋಸ್ ಮಿಶ್ರಿತ ಹಾಲನ್ನು ಬಾಟಲಿಗೆ ತುಂಬಿಸಿ ಕುಡಿಸಲಾಗುತ್ತಿದೆ. ನಿದ್ರಿಸುವ ಸಮಯ ಬಿಟ್ಟು ಎಲ್ಲ ವೇಳೆಯಲ್ಲಿಯೂ ರಾಜು ಮನೆಯ ಮುಂದೆ ನಿಂತು ಚಿನ್ನಾಟವಾಡುತ್ತಿರುವ ವೇದಾ ಮನೆಯಂಗಳದ ಮಗುವಾಗಿದ್ದಾಳೆ.

ಮರಿಯಾನೆ ಸಲಹುತ್ತಿರುವ ಕಾವಾಡಿ ದಂಪತಿ

ಇದನ್ನೂ ಓದಿ:ನಾಗರಹೊಳೆ ಬಂಡೀಪುರದಲ್ಲಿ ಇಂದಿನಿಂದ ಆನೆ ಗಣತಿ... ದಕ್ಷಿಣ ಭಾರತದ 7 ರಾಜ್ಯಗಳ ಗಣತಿ ನೇತೃತ್ವ ವಹಿಸಿರುವ ಅರಣ್ಯ ಇಲಾಖೆ

ತೆಪ್ಪೆಕಾಡಿನ ಆನೆ ಶಿಬಿರಕ್ಕೆ ಮೋದಿ ಭೇಟಿ : ಪ್ರಧಾನಿ ನರೇಂದ್ರ ಮೋದಿ ಅವರು ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸಫಾರಿ ಹಾಗೂ ತಮಿಳುನಾಡಿನ ತೆಪ್ಪೆಕಾಡಿನ ಈ ಆನೆ ಶಿಬಿರಕ್ಕೆ (ಏಪ್ರಿಲ್​-9-2023) ಭೇಟಿ ನೀಡಿದ್ದರು. ಬಂಡೀಪುರದಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಸಫಾರಿ ನಡೆಸಿದ್ದರು. ತೆಪ್ಪೆಕಾಡಿನ ಆನೆ ಶಿಬಿರದಲ್ಲಿ ಆಸ್ಕರ್ ವಿಜೇತ 'ದ ಎಲಿಫೆಂಟ್​ ವಿಸ್ಪರರ್ಸ್' ಚಿತ್ರದ ಮುಖ್ಯ ಪಾತ್ರಧಾರಿಗಳಾದ ಬೊಮ್ಮನ್​ ಮತ್ತು ಬೆಳ್ಳಿ ದಂಪತಿಯನ್ನು ಮೋದಿ ಭೇಟಿ ಮಾಡಿದ್ದರು. ಹುಲಿ ಯೋಜನೆ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಅವರು ಭೇಟಿ ನೀಡಿದ್ದರು.

ಇದನ್ನೂ ಓದಿ:ಚಾಮರಾಜನಗರ: ಪೊರಕೆ ಕಡ್ಡಿ ಕೀಳಲು ಹೋದಾಗ ಆನೆ ದಾಳಿ; ತಂದೆ ಬಲಿ, ಮಗ ಪಾರು

Last Updated : Jul 20, 2023, 7:03 PM IST

ABOUT THE AUTHOR

...view details