ಕಾರು- ಈಚರ್ ವಾಹನ ಡಿಕ್ಕಿಯಾಗಿ ಹೊತ್ತಿ ಉರಿದ ವಾಹನಗಳು ಚಾಮರಾಜನಗರ:ಕಾರು ಹಾಗೂ ಈಚರ್ ವಾಹನಗಳು ಪರಸ್ಪರ ಅಪಘಾತಕ್ಕೀಡಾಗಿ ಕಾರು ಚಾಲಕ ಸಜೀವ ದಹನವಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ. ಮೈಸೂರು ಮೂಲದ ಮುಜಾಮಿಲ್ ಅಹಮದ್ ಮೃತ ಚಾಲಕ ಎಂದು ತಿಳಿದುಬಂದಿದೆ. ಈಚರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೈಸೂರಿನಿಂದ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಗುಂಡ್ಲುಪೇಟೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಈಚರ್ ಹಿರಿಕಾಟಿ ಗೇಟ್ ಬಳಿ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಮೊದಲು ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಈಚರ್ನಲ್ಲಿದ್ದವರು ಹೊರಕ್ಕೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಈಚರ್ ವಾಹನದ ಮುಂಭಾಗ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:Manipal Accident: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಮಣಿಪಾಲ ಆಸ್ಪತ್ರೆ ವೈದ್ಯ ಸಾವು
ಹೊಸಪೇಟೆ ಬಳಿ ಶುಕ್ರವಾರ ಭೀಕರ ಅಪಘಾತ:ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಎರಡು ಆಟೋ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದರಿಂದ 9 ಜನರ ಮೃತಪಟ್ಟ ಭೀಕರ ಘಟನೆ ಶುಕ್ರವಾರ ನಡೆದಿತ್ತು. 8 ಜನರು ಶುಕ್ರವಾರ ಮೃತಪಟ್ಟಿದ್ದರೆ, ಶನಿವಾರ ಓರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮೃತರನ್ನು ಯಾಸ್ಮೀನ್ (45), ಸಲೀಮಾ (40), ಉಮೇಶ್ (27), ಜಹೀರ್ (16), ಸಪ್ರಾಬಿ (55), ಕೌಸರ್ ಬಾನು (35), ಇಬ್ರಾಹಿಂ (33), ಸಹಿರಾ (25), ಸಹಿರಾ (25) ಹಾಗೂ ತಾಹೀರ್ (10) ಎಂದು ಗುರುತಿಸಲಾಗಿದೆ.
ಮೃತ ಉಮೇಶ್ ಬಳ್ಳಾರಿಯ ಬಂಡಿಹಟ್ಟಿಯವರಾಗಿದ್ದರೆ ಉಳಿದ ಎಲ್ಲರೂ ಬಳ್ಳಾರಿ ನಗರ ಕೌಲ್ ಬಜಾರ್ ನಿವಾಸಿಗಳಾಗಿದ್ದಾರೆ. ಮೃತರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ತಲಾ 2 ಲಕ್ಷ ರೂ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಇನ್ನು ಹೆಚ್ಚಿನ ಪರಿಹಾರಕ್ಕೆ ಸಿಎಂಗೆ ಮನವಿ ಮಾಡುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಶನಿವಾರ ಭರವಸೆ ನೀಡಿದ್ದರು.
ಮಹಾರಾಷ್ಟ್ರ ಬಸ್ ಅಪಘಾತದಲ್ಲಿ 25 ಜನ ಸಾವು:ಬುಲ್ಥಾನ್ ಜಿಲ್ಲೆಯಲ್ಲಿ ಶನಿವಾರ ನಸುಕಿನ ಜಾವ ಖಾಸಗಿ ಬಸ್ ಟೈರ್ ಸ್ಫೋಟಗೊಂಡು ಪಲ್ಟಿಯಾದ್ದರಿಂದ ಬೆಂಕಿ ಹೊತ್ತುಕೊಂಡು ಬಸ್ನಲ್ಲಿದ್ದ 25 ಪ್ರಯಾಣಿಸರು ಮೃತಪಟ್ಟಿದ್ದರು. ಮೂರು ಮಕ್ಕಳು ಸೇರಿ 25 ಪ್ರಯಾಣಿಕರು ಸಾವನ್ನಪ್ಪಿ, ಎಂಟು ಜನ ಗಾಯಗೊಂಡಿದ್ದರು. ನಾಗ್ಪುರ್ದಿಂದ ಪುಣೆಗೆ ತೆರಳುತ್ತಿದ್ದಾಗ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ಸಂಭವಿಸಿತ್ತು. ಬಸ್ಗೆ ಬೆಂಕಿ ಹೊತ್ತಿಕೊಂಡ ತಕ್ಷಣವೇ ಚಾಲಕ ಬಸ್ನಿಂದ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಮಾಹಾರಾಷ್ಟ್ರ ಸರ್ಕಾರ 5 ಲಕ್ಷ ರೂ ಪರಿಹಾರ ಘೋಷಿಸಿತ್ತು. ಜೊತೆಗೆ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೋದಿ ಅವರು ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ್ದರು.