ಮತಾಂತರ ವಿರೋಧಿ ಹೋರಾಟ: ರಾಷ್ಟ್ರಗೀತೆ ಹಾಡಿ ಪರಿಸ್ಥಿತಿ ತಿಳಿಗೊಳಿಸಿದ ಡಿವೈಎಸ್ಪಿ! - Charges of conversion by Christian missionaries in Chamarajanagar
ಚಾಮರಾಜನಗರದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನಡೆಯುತ್ತಿದ್ದ ಮಾತಿನ ಚಕಮಕಿ ಗಂಭೀರವಾಗುತ್ತಿದ್ದಂತೆ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಪ್ರತಿಭಟನಾಕಾರರಿಂದ ಮೈಕ್ ಕಿತ್ತುಕೊಂಡು ರಾಷ್ಟ್ರಗೀತೆ ಆರಂಭಿಸಿ ಪರಿಸ್ಥಿತಿ ತಿಳಿಗೊಳಿಸಿದರು..
ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ
ಚಾಮರಾಜನಗರ: ಜಿಲ್ಲೆಯಲ್ಲಿ ಕ್ರೈಸ್ಥ ಮಿಷನರಿಗಳು ಎಗ್ಗಿಲ್ಲದೆ ಮತಾಂತರ ನಡೆಸುತ್ತಿವೆ ಎಂದು ಆರೋಪಿಸಿ ಮತಾಂತರ ವಿರೋಧಿ ಹೋರಾಟ ಸಮಿತಿ, ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಗರದಲ್ಲಿ ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು.
ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದಲ್ಲೇ ಮೈಕ್ ಮೂಲಕ ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಪೊಲೀಸರು ಪ್ರತಿಭಟನಾಕಾರರನ್ನು ಹಾಗೂ ಮೈಕ್ ಕಟ್ಟಿದ್ದ ವಾಹನವನ್ನು ತಡೆಯುತ್ತಿದ್ದಂತೆ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಆರಂಭವಾಯಿತು.
ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನಡೆಯುತ್ತಿದ್ದ ಮಾತಿನ ಚಕಮಕಿ ಗಂಭೀರವಾಗುತ್ತಿದ್ದಂತೆ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಪ್ರತಿಭಟನಾಕಾರರಿಂದ ಮೈಕ್ ಕಿತ್ತುಕೊಂಡು ರಾಷ್ಟ್ರಗೀತೆ ಆರಂಭಿಸಿದರು.
ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆ ಪ್ರತಿಭಟನಾಕಾರರು ತಮ್ಮ ಕೂಗಾಟವನ್ನು ಬಿಟ್ಟು ಡಿವೈಎಸ್ಪಿ ಅವರೊಂದಿಗೆ ರಾಷ್ಟ್ರಗೀತೆ ಹಾಡಿದರು.ಬಳಿಕ ಪ್ರತಿಭಟನಾಕಾರರು ಜಿಲ್ಲಾಡಳಿತ ಪ್ರವೇಶದ್ವಾರದ ಒಳಗೆ ಪ್ರವೇಶಿಸಿ ರಸ್ತೆ ಬದಿಯಲ್ಲೇ ಕುಳಿತು ಮತಾಂತರಿಗಳು ಹಾಗೂ ಜಿಲ್ಲಾಡಳಿತದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.