ಚಾಮರಾಜನಗರ: ಹಿಜಾಬ್ ಬಳಿಕ ತಣ್ಣಗಿದ್ದ ಸಂಘರ್ಷ ಮತ್ತೆ ಗುಂಡ್ಲುಪೇಟೆಯಲ್ಲಿ ಆರಂಭಗೊಂಡಿದ್ದು, ಇಲ್ಲಿನ ಖಾಸಗಿ ಶಾಲೆಯೊಂದರ ವಿರುದ್ಧ ಮತಾಂತರದ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿರುವ ಪಬ್ಲಿಕ್ ಶಾಲೆಯ ವಿರುದ್ಧ ಹಿಂಜಾವೇ ಮತಾಂತರಕ್ಕೆ ಪ್ರೇರೆಪಿಸುತ್ತಿದ್ದಾರೆಂದು ಆರೋಪಿಸಿ ತಹಶೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದೆ.
ಅಷ್ಟೇ ಅಲ್ಲ ಪ್ರತಿಭಟನೆಯನ್ನು ನಡೆಸಿ ಆಕ್ರೋಶ ಹೊರಹಾಕಿದೆ. ಅಲ್ಲದೇ, ಶಾಲೆ ನಡೆಸುವ ಪರವಾನಗಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಪತ್ರವನ್ನೂ ಕೂಡಾ ಸಂಘಟನೆಯ ಕಾರ್ಯಕರ್ತರು ರವಾನಿಸಿದ್ದಾರೆ.
ಏನಿದು ಹೊಸ ವಿವಾದ : ಸಂಕ್ರಾಂತಿ ಹಬ್ಬದ ದಿನ ಶಾಲೆ ತೆರೆದಿದ್ದರಿಂದ ಮತ್ತು ಶಾಲೆಯಲ್ಲಿ ರಾಷ್ಟ್ರ ನಾಯಕರ ಭಾವಚಿತ್ರ ಇಡದೇ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ವಿಚಾರ ಭಾನುವಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಹಬ್ಬದ ದಿನವಾದ ಭಾನುವಾರ ಶಾಲೆಯು ಇಲ್ಲಿನ ಮಕ್ಕಳಿಗೆ ರಜೆ ನೀಡದೇ ಎಲ್ಲಾ ವಿದ್ಯಾರ್ಥಿಗಳನ್ನು ತರಗತಿಗೆ ಕರೆಯಿಸಿಕೊಳ್ಳಲಾಗಿದೆಯಂತೆ. ಈ ವಿಚಾರ ಹಿಂದೂ ಜಾಗರಣಾ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿಯವರಿಗೆ ಗೊತ್ತಾಗಿದೆ. ಶಾಲೆಯ ಈ ನಿರ್ಧಾರವನ್ನು ಖಂಡಿಸಿ, ಶಾಲೆಗೆ ಭೇಟಿ ನೀಡಿದ ಸಂಘಟನೆಗಳ ಕಾರ್ಯಕರ್ತರು ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ರಜೆ ನೀಡದೇ, ರಜಾ ದಿನದಂದು ತರಗತಿಗಳನ್ನು ನಡೆಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯಲ್ಲಿ ರಾಷ್ಟ್ರ ನಾಯಕ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬೀರುವಿನಲ್ಲಿರಿಸಲಾಗಿತ್ತು ಎಂದು ದಲಿತ ಸಂಘಟನೆ ಮುತ್ತಣ್ಣ ಎಂಬುವರು ಆರೋಪಿಸಿದ್ದಾರೆ.