ಚಾಮರಾಜನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರರಕ್ಕೆ ಭೇಟಿ ನೀಡಲಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಬಂಡೀಪುರ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 181 ಮತ್ತು 766ರ ರಸ್ತೆಯಲ್ಲಿ ತಮಿಳುನಾಡು ಕಡೆಗೆ ಹೋಗುವ ಮತ್ತು ಬರುವ ಎಲ್ಲ ವಾಹನಗಳನ್ನು ಏ.7ರ ಸಂಜೆ 4 ಗಂಟೆಯಿಂದ ಏ.9ರ ಬೆಳಗ್ಗೆ 12 ಗಂಟೆಯವರೆಗೆ ಮತ್ತು ಸರ್ಕಾರಿ ವಾಹನ, ಸರ್ಕಾರಿ ಬಸ್ಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಏ.8ರ ಸಂಜೆ 4 ಗಂಟೆಯಿಂದ ಏ.9ರ ಬೆಳಗ್ಗೆ 12 ಗಂಟೆಯವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಆದೇಶ ಹೊರಡಿಸಿದ್ದಾರೆ. ಇನ್ನು ರಕ್ಷಣಾ ಹಿತದೃಷ್ಠಿಯಿಂದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಲ್ಲಾ ರೀತಿಯ ಡ್ರೋನ್ ಹಾರಾಟವನ್ನು ಏ.9ರವರೆಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಸಫಾರಿಯೂ ಬಂದ್:ಇದೇ 9 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಭೇಟಿ ನೀಡಲಿರುವ ಹಿನ್ನೆಲೆ ಈಗಾಗಲೇ ಕಳೆದ ಎರಡು ದಿನಗಳಿಂದ ವನ್ಯಜೀವಿ ಸಫಾರಿ ನಿಷೇಧಿಸಲಾಗಿದೆ. ಬಿಗಿ ಭದ್ರತೆ, ಪೂರ್ವ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಏ.5 ರಿಂದ ಏ.9 ರವರೆಗೆ ವನ್ಯಜೀವಿ ಸಫಾರಿಯನ್ಬು ನಿರ್ಬಂಧಿಸಿ ಡಿಸಿ ಆದೇಶ ಹೊರಡಿಸಿದ್ದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ರಾಜ್ಯದಲ್ಲೇ ಅತ್ಯಧಿಕ ಹುಲಿಗಳಿರುವ ರಕ್ಷಿತಾರಣ್ಯ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಸಫಾರಿ ನಡೆಯುತ್ತಿತ್ತು. ಜತೆಗೆ, ಬಂಡೀಪುರ ವ್ಯಾಪ್ತಿಯಲ್ಲಿ ಬರುವ ರೆಸಾರ್ಟ್, ಹೋಂ ಸ್ಟೇ, ಲಾಡ್ಜ್ ಗಳಲ್ಲಿ ಜನರ ವಾಸ್ತವ್ತ, ತಂಗುವಿಕೆ, ಭೇಟಿಯನ್ನು ನಿಷೇಧಿಸಲಾಗಿದೆ.