ಚಾಮರಾಜನಗರ:ಬರೋಬ್ಬರಿ 4 ತಿಂಗಳ ಬಳಿಕ ನಗರಕ್ಕೆ ಸಂಸದ ವಿ.ಶ್ರೀನಿವಾಸಪ್ರಸಾದ್ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದರು.
ಕಳೆದ ಜ. 3 ನೇ ವಾರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದ ಸಂಸದ ಶ್ರೀನಿವಾಸ್ ಪ್ರಸಾದ್ ಬಳಿಕ ಜಿಲ್ಲೆಗೆ ಭೇಟಿ ನೀಡಿರಲಿಲ್ಲ. ಇಂದು ಕೋವಿಡ್ - 19 ಕುರಿತು ಚಾಮರಾಜನಗರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಜಿಲ್ಲಾಡಳಿತ ಕೈಗೊಂಡಿರುವ ಅಗತ್ಯ ಕ್ರಮಗಳನ್ನು ಕುರಿತು ಅಧಿಕಾರಿಗಳ ಬಳಿ ಮಾಹಿತಿ ಪಡೆದರು.
ಅಧಿಕಾರಿಗಳೊಂದಿಗೆ ಸಂಸದ ವಿ.ಶ್ರೀನಿವಾಸಪ್ರಸಾದ್ ಬಳಿಕ, ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೊರೊನಾ ತಡೆಗಟ್ಟಲು ಜಿಲ್ಲಾಡಳಿತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಹಳ್ಳಿಗಳಲ್ಲೂ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಕ್ಕೆ ಮೆಚ್ಚುಗಾರ್ಹ ರೀತಿಯಲ್ಲಿ ಸ್ಪಂದಿಸಿದ್ದಾರೆ. ಇಂತಹ ಸಾಂಘಿಕ ಹೋರಾಟದಿಂದ ಮಾತ್ರ ನಮ್ಮ ಜಿಲ್ಲೆಯನ್ನು ಹಸಿರು ವಲಯದಲ್ಲೇ ಇರಿಸಿಕೊಳ್ಳ ಬಹುದು ಎಂದರು.
ಲಾಕ್ಡೌನ್ ವೇಳೆ ಜಿಲ್ಲೆಗೆ ಭೇಟಿ ನೀಡದಿರುವ ಕುರಿತ ಕೇಳಿದ ಪ್ರಶ್ನೆಗೆ ಗರಂ ಆದ ಅವರು, ಲಾಕ್ಡೌನ್ ಏನೆಂಬುದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು. ಹಿರಿಯ ನಾಗರಿಕರು ಮನೆಯಿಂದ ಹೊರಗಡೆ ಬರದಂತೆ ನಿರ್ಬಂಧವಿದೆ. ಲಾಕ್ಡೌನ್ನಲ್ಲಿ ಬಂದು ಅರೆಹುಚ್ಚನಂತೆ ಅಲೆಯೋಕಾಗುತ್ತಾ? ಪ್ರತಿಪಕ್ಷದವರೇ ಕೇಳಲಿಲ್ಲ ನೀವಾದ್ರೂ ಕೇಳಿದಿರಿ, ಮೊಸರಲ್ಲಿ ಮಾಧ್ಯಮದವರು ಕಲ್ಲು ಹುಡುಕಬಾರದೆಂದರು.
ಅಧಿಕಾರಿಗಳೊಂದಿಗೆ ಸಂಸದ ವಿ.ಶ್ರೀನಿವಾಸಪ್ರಸಾದ್ ಇದೇ ವೇಳೆ, ಜುಬಿಲಂಟ್ ಕಾರ್ಖಾನೆ ಪುನಾರಂಭ ಕುರಿತು ಮಾತನಾಡಿ, ಸದ್ಯಕ್ಕೆ ಉನ್ನತ ಮಟ್ಟದ ತನಿಖೆ ಬೇಕಾಗಿಲ್ಲ. ಜುಬಿಲಂಟ್ ಕಾರ್ಖಾನೆಯಿಂದ ನಿಯಮ ಉಲ್ಲಂಘನೆ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ತನಿಖೆಗೆ ಹರ್ಷ ಗುಪ್ತ ನೇಮಿಸಲಾಗಿತ್ತು. ಆದರೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. 50 ಸಾವಿರ ಕಿಟ್, 10 ಗ್ರಾಮ ದತ್ತು ಷರತ್ತಿನೊಂದಿಗೆ ಕಾರ್ಖಾನೆ ಪುನರಾರಂಭಕ್ಕೆ ಅವಕಾಶ ನೀಡಲಾಗಿದೆ. ನಮಗೆ ಜನರ ಹಿತಾಸಕ್ತಿ ಮುಖ್ಯವೇ ಹೊರತು ಕಾರ್ಖಾನೆಯದ್ದಲ್ಲ ಎಂದು ತಿಳಿಸಿದರು.
ಕೊರೊನಾ ಸಂಕಷ್ಟದ ಸಮಯದಲ್ಲೂ ಸಂಸದರು ಕ್ಷೇತ್ರಕ್ಕೆ ಬಾರದಿದ್ದರಿಂದ ಜನರು ಅಸಮಾಧಾನ ಹೊರಹಾಕಿದ್ದರು. ಈ ಕುರಿತು ಈಟಿವಿ ಭಾರತ ವರದಿ ಬಿತ್ತರಿಸಿ ಗಮನ ಸೆಳೆದಿತ್ತು.