ಚಾಮರಾಜನಗರ: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ತ್ರೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸನಾತನ ಧರ್ಮದ ವಿರುದ್ಧ ಹೇಳಿಕೆ ಕೊಟ್ಟು ವಿವಾದವನ್ನು ಮೈ ಮೇಲೆ ಎಳೆದುಕೊಂಡಿರುವ ಸಚಿವರ ವಿರುದ್ಧ ನಟ ಪ್ರಥಮ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹನೂರಿನಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ನಟ ಪ್ರಥಮ್, ''ಏನು ಹೇಳಿದ್ರೂ ಸರಿ ಅನ್ನೋ ಮನೋಭಾವ ಒಳ್ಳೆಯದಲ್ಲ, ತಪ್ಪು ತಿದ್ದುಕೊಳ್ಳಲು ಬಹಳಷ್ಟು ವೇದಿಕೆಗಳಿದ್ದರೂ ತಾನು ಮಾತನಾಡಿದ್ದೇ ಸರಿ ಎಂದು ಹೇಳಿಕೊಳ್ಳುವುದನ್ನು ಬಿಡಬೇಕು'' ಎಂದು ವಾಗ್ದಾಳಿ ನಡೆಸಿದರು.
ಜನರ ಭಾವನೆಗಳಿಗೆ ನೋವಾಗಿದೆ.... ಉಡಾಫೆ ಹೇಳಿಕೆಗಳಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುತ್ತದೆ ಅನ್ನೋ ಪರಿಕಲ್ಪನೆ ಇರಬೇಕು. ಅವರ ಹೇಳಿಕೆಯಿಂದ ಎಷ್ಟೋ ಜನರ ಭಾವನೆಗಳಿಗೆ ನೋವಾಗಿದೆ. ಇಷ್ಟ ಇಲ್ಲದಿದ್ದರೆ ಧರ್ಮವನ್ನು ಪೂಜಿಸುವುದು ಬೇಡ. ಯಾರೇ ಆಗಲಿ ತಮ್ಮ ತಮ್ಮ ಧರ್ಮವನ್ನು ಗೌರವಿಸಬೇಕು. ಈ ರೀತಿ ಮಾತಾಡೋದು ತಪ್ಪು. ಸಚಿವ ಉದಯನಿಧಿ ಸ್ಟಾಲಿನ್ ಅವರು ತಪ್ಪಾಗಿ ಮಾತಾಡಿದ ಬಳಿಕ ಕ್ಷಮೆ ಕೇಳುತ್ತಾರೆ ಅಂದುಕೊಂಡಿದ್ದೆ. ಆದರೆ, ಮತ್ತೆ ಅದನ್ನೇ ಮುಂದುವರಿಸಿದ್ದಾರೆ. ಹೀಗಾಗಿ ಅಂತವರ ಬಗ್ಗೆ ಮಾತಾಡೋದನ್ನೇ ಬಿಡಬೇಕು ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ನವೆಂಬರ್ನಲ್ಲಿ ಪ್ರಥಮ್ ಮದುವೆ: ನವೆಂಬರ್ 23-24ರ ಸಂದರ್ಭ ವಿವಾಹ ಸಮಾರಂಭ ಇಟ್ಟುಕೊಳ್ಳಬೇಕು ಎಂದು ಹಿರಿಯರು ನಿಶ್ಚಯಿಸಿದ್ದಾರೆ. ತೋರ್ಪಡಿಕೆಗಾಗಿ 50 ಸಾವಿರ ಜನರನ್ನು ಕರೆಯದೇ ಸಣ್ಣ ಸಮಾರಂಭದಲ್ಲಿ ಹಸೆಮಣೆ ಏರುತ್ತೇನೆ. ಅದ್ಧೂರಿತನಕ್ಕಿಂತ ಹೇಗೆ ಅರ್ಥಪೂರ್ಣವಾಗಿ ಜೀವನ ನಡೆಸುತ್ತೇವೆ ಎನ್ನುವುದು ಮುಖ್ಯ ಎಂದು ತಿಳಿಸಿದರು.