ಚಾಮರಾಜನಗರ: ಯರ್ರಾಬಿರ್ರಿ ವಾಹನ ಚಾಲನೆಯಿಂದಾಗಿ ಅಮೂಲ್ಯ ಜೀವಗಳು ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಒಟ್ಟು 123 ಮಂದಿ ಮೃತಪಟ್ಟಿದ್ದು, 745 ಮಂದಿ ಗಾಯಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದಕುಮಾರ್ ರಾಷ್ಟ್ರೀಯ ಹೆದ್ದಾರಿ ವಿಳಂಬಗತಿ ಕಾಮಗಾರಿ, ಅಜಾಗರೂಕತೆಯ ವಾಹನ ಸವಾರಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲೇ 71 ಮಂದಿ ಮೃತಪಟ್ಟಿದ್ದಾರೆ. ಬಹುತೇಕ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಮತ್ತು ಸಂಚಾರಿ ನಿಯಮ ಪಾಲಿಸದೇ ವಾಹನ ಚಾಲನೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದಕುಮಾರ್ ತಿಳಿಸಿದ್ದಾರೆ.
16 ಬ್ಲಾಕ್ ಸ್ಪಾಟ್ ಗುರುತು:
ವೀರನಪುರ ಕ್ರಾಸ್, ಎಪಿಎಂಸಿ-ಕೆಇಬಿ ರಸ್ತೆ, ಕೆಇಬಿಯಿಂದ ಐಬಿ ರಸ್ತೆ, ಹಂಗಳ, ಅಗ್ನಿಶಾಮಕ ಠಾಣೆ, ಬೇಗೂರು, ಹಿರಿಕಾಟಿ ಗೇಟ್, ರಾಘವಪುರ ಗೇಟ್, ಯಳಂದೂರು ಪಟ್ಟಣ, ಸತ್ತೇಗಾಲ, ತ್ರಯಂಬಕಪುರ- ಕಗ್ಗಳ, ತೆರಕಣಾಂಬಿಹುಂಡಿ- ಗ್ಯಾಸ್ ಆಫೀಸ್, ಸೋಮವಾರಪೇಟೆ, ಬೆಂಡರವಾಡಿ ಕೆರೆ ತಿರುವು, ಮರಿಯಾಲ ಗೇಟ್, ಹರದನಹಳ್ಳಿ ಕ್ರಾಸ್, ಗರಗನಹಳ್ಳಿ ಗೇಟ್, ಅರೇಪುರ ಗೇಟ್, ಕೊಳ್ಳೇಗಾಲದ ಬಾಪುನಗರ ಎಂಬ 16 ಬ್ಲಾಕ್ ಸ್ಪಾಟ್ ಗುರುತಿಸಲಾಗಿದ್ದು, ಅಫಘಾತ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಎಚ್ಚರ ವಹಿಸಿದೆ.
ದಂಡಕ್ಕೂ ಜಗ್ಗದ ಬೈಕ್ ಸವಾರರು:
ಅ.31ರ ವರೆಗೆ 89 ಸಾವಿರಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿರುವ ಪೊಲೀಸರು, 1 ಕೋಟಿ 42 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಹೆಲ್ಮೆಟ್ ರಹಿತ ಸವಾರರನ್ನು ಹಿಡಿದುಹಿಡಿದು ದಂಡ ಕಕ್ಕಿಸಿದರೂ ಹೆಲ್ಮೆಟ್ ಧರಿಸುವವರ ಸಂಖ್ಯೆ ಮಾತ್ರ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿಲ್ಲ.