ಕೊಳ್ಳೇಗಾಲ :ಪ್ರಿಯಕರನ ಮಾತಿಗೆ ಬೇಸತ್ತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೊಬ್ಬಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆತಾಲೂಕಿನ ಮಧುವನಹಳ್ಳಿ ಗ್ರಾಮದ ಆಂಜನೇಯಪುರದಲ್ಲಿ ನಡೆದಿದೆ.
ಇದೇ ಗ್ರಾಮದ ನಂಜಮಣಿ (21) ಸಾವನ್ನಪ್ಪಿರುವ ಯುವತಿ. ಈಕೆಯ ಮನೆಯಲ್ಲಿ ಮದುವೆಗೆ ಹುಡುಗನನ್ನು ಹುಡುಕುತ್ತಿದ್ದ ವೇಳೆ ಅದೇ ಗ್ರಾಮದ ಸಿದ್ದಪ್ಪಸ್ವಾಮಿ ಅಲಿಯಾಸ್ ಉಪ್ಪಿ ಎಂಬಾತನನ್ನು ಕಳೆದ 7 ವರ್ಷದಿಂದ ಪ್ರೀತಿಸುತ್ತಿರುವುದಾಗಿ ಮೃತ ಯುವತಿ ಮನೆಗೆ ತಿಳಿಸಿದ್ದಾಳೆ. ಈ ಸಂಬಂಧ ಗ್ರಾಮಸ್ಥರಲ್ಲಿ ಸಿದ್ದಪ್ಪಸ್ವಾಮಿಯ ಬಗ್ಗೆ ವಿಚಾರಿಸಿದಾಗ ಅವನು ಅದೇ ಗ್ರಾಮದ ಹೇಮಾವತಿ ಎಂಬ ಯುವತಿಯನ್ನು ಸಹ ಪ್ರೀತಿಸುತ್ತಿರುವುದು ತಿಳಿದಿದೆ.
ಊರಿನ ಮುಖಂಡರ ಸಮ್ಮುಖದಲ್ಲಿ ಸಿದ್ದಪ್ಪಸ್ವಾಮಿಯನ್ನು ಈ ಬಗ್ಗೆ ಪ್ರಶ್ನಿಸಿದಾಗ ನಂಜಮಣಿಯನ್ನು 7ವರ್ಷಗಳಿಂದ ಪ್ರೀತಿಸುತ್ತಿದ್ದೆ. ಆದರೆ, ಅವಳು ವಿದ್ಯಾಭ್ಯಾಸಕ್ಕಾಗಿ ಊರಿಂದ ಹೊರಟ ನಂತರ ಅದೇ ಗ್ರಾಮದ ಹೇಮಾವತಿಯನ್ನು 3 ವರ್ಷಗಳಿಂದ ಪ್ರೀತಿಸುತ್ತಿರೋದಾಗಿ, ಇಬ್ಬರನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ.
ಇದಕ್ಕೆ ಒಪ್ಪದ ನಂಜಮಣಿ ತಾಯಿ ಲಕ್ಷ್ಮಿ ಹಾಗೂ ಗ್ರಾಮಸ್ಥರು ಯಾರಾದರೊಬ್ಬರನ್ನು ಮದುವೆಯಾಗೆಂದು ತಿಳಿಸಿದ್ದರು. ಈ 6ವಿಚಾರವಾಗಿ ಸ್ವಲ್ಪ ಕಾಲಾವಕಾಶ ಕೇಳಿದ್ದ ಸಿದ್ದಪ್ಪಸ್ವಾಮಿ, ನಂಜಾಮಣಿಗೆ ಕರೆಮಾಡಿ ನಿನ್ನಿಂದ ಊರಿನಲ್ಲಿ ತುಂಬ ಪ್ರಾಬ್ಲಂ ಆಗುತ್ತಿದೆ. ನನಗೆ ಯಾವುದೇ ಮದುವೆ ಬೇಡ.
ನೀನು ಸಾಯಬೇಕು ಇಲ್ಲ ನಾನು ಸಾಯಬೇಕು ಆಗಲೇ ಎಲ್ಲರಿಗೂ ನೆಮ್ಮದಿ ಎಂದು ಹೇಲಿದ್ದಾನೆ ಎನ್ನಲಾಗಿದೆ. ಪ್ರಿಯತಮನ ಮಾತಿಗೆ ಬೇಸತ್ತ ಯುವತಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನ ಕಂಡ ತಾಯಿ ಕೂಡಲೇ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ನಂಜಮಣಿ ಮೃತ ಪಟ್ಟಿದ್ದಾಳೆ.
ಈ ಹಿನ್ನಲೆ ಮೃತಳ ತಾಯಿ ಲಕ್ಷ್ಮಿ, ನನ್ನ ಮಗಳಿಗೆ ಸಾಯಲು ಭಾವನಾತ್ಮಕವಾಗಿ ಪ್ರಚೋದನೆ ನೀಡಿದ್ದ ಸಿದ್ದಪ್ಪಸ್ವಾಮಿಯೇ ಸಾವಿಗೆ ಕಾರಣ. ಇವನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಈಗ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿ ಸಿದ್ದಪ್ಪಸ್ವಾಮಿಯನ್ನು ಬಂಧಿಸಿದ್ದಾರೆ.