ಚಾಮರಾಜನಗರ: ಮಂಗಳಾರತಿಯ ಘಂಟನಾದ ಹೊಮ್ಮುತ್ತಿದ್ದಂತೆ ಶಿವನಿಗೆ ನಮಿಸಲು ನಂದಿಯೊಂದು ಪ್ರತಿದಿನ ಈ ದೇಗುಲಕ್ಕೆ ಹಾಜರಾಗುತ್ತದೆ. ಜೊತೆಗೆ ಲಿಂಗದ ಮೇಲೆ ಸದಾ ಸೂರ್ಯ ರಶ್ಮಿ ಬೀಳುವ ವಿಶಿಷ್ಟ ವಾಸ್ತುಶಿಲ್ಪ ಇಲ್ಲಿನದ್ದಾಗಿದೆ.
ತ್ರಯಂಬಕಪುರ ಗ್ರಾಮದಲ್ಲಿದೆ ಬಲು ವಿಶಿಷ್ಟ ದೇವಾಲಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ತ್ರಯಂಬಕಪುರ ಗ್ರಾಮದಲ್ಲಿ ನೂರಾರು ವರ್ಷಗಳ ಹಳೆಯದಾದ ತ್ರಯಂಬಕೇಶ್ವರ ಸನ್ನಿಧಿಯಲ್ಲಿ ನಂದಿ ಮತ್ತು ನೇಸರನ ನಮಿಸುವ ಜುಗಲ್ಬಂದಿ ಪ್ರತಿದಿನವೂ ನಡೆಯುತ್ತಿದೆ. ಎಲ್ಲ ದೇವಾಲಯಗಳಲ್ಲಿ ಕಲ್ಲಿನ ಬಸವ ದೇವರಿಗೆ ನಮಿಸಿದರೇ ಇಲ್ಲಿ ಸಾಕ್ಷಾತ್ ಬಸವನೇ ಪೂಜಾ ಸಮಯಕ್ಕೆ ಬರುವುದು ಕ್ಷೇತ್ರದ ವಿಶೇಷ.
ಇದು ಸುಮಾರು 600 ರಿಂದ 700 ವರ್ಷಗಳ ಹಳೆಯ ದೇವಸ್ಥಾನ. ವಿಶಾಲ ದರ್ಬಾರ್ ಹಾಲ್, ನಾದ ಮಂಟಪದ ವಾಸ್ತುಶಿಲ್ಪ ಅತ್ಯದ್ಭುತ. ಅಷ್ಟೇ ಅಲ್ಲ, ನಾದ ಮಂಟಪದಲ್ಲಿರುವ ಕಲ್ಲಿನ ಕಂಬಗಳು ಸಪ್ತಸ್ವರ ಹೊಮ್ಮಿಸುವುದು ಅಪೂರ್ವ ಕಲಾತ್ಮಕತೆಗೆ ಸಾಕ್ಷಿ.
ಪೂಜೆ ಸಮಯಕ್ಕೆ ನಂದಿಯ ಆಗಮನ.. ಗ್ರಾಮಸ್ಥರೊಬ್ಬರು ದೇವರಿಗೆ ಬಿಟ್ಟಿರುವ ನಂದಿಯೊಂದು ಪೂಜೆಯ ಸಮಯಕ್ಕೆ ಎಲ್ಲೇ ಇದ್ದರೂ ಬಂದು ದೇವರ ಮುಂದೆ ನಿಂತು ನಮಿಸಿ ನಂತರ ಪೂಜೆಯಾದ ಬಳಿಕ ಗರ್ಭಗುಡಿಯನ್ನು ಒಂದು ಸುತ್ತು ಹಾಕುತ್ತದೆ. ದೇಗುಲದ ಪೂರ್ವಾಭಿಮುಖವಾಗಿದ್ದು, ಸೂರ್ಯೋದಯದಿಂದ ಸೂರ್ಯಾಸ್ತದವರೆವಿಗೂ ಹೊರಗಿನ ಕಲ್ಲು ಬಸವನ ಹಾದು ಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುವುದು ದೇಗುಲದ ವಿಶೇಷತೆ ಎನ್ನುತ್ತಾರೆ ಅರ್ಚಕರಾದ ನಾಗೇಂದ್ರಸ್ವಾಮಿ.
ನಾಸಿಕ್ನ ಜ್ಯೋತಿರ್ಲಿಂಗ ಬಿಟ್ಟರೇ ನಮ್ಮಲ್ಲೇ ತ್ರಯಂಬಕೇಶ್ವರ ಇರುವುದು. ಜೊತೆಗೆ ತ್ರಯಂಬಕೇಶ್ವರಿ, ಶಕ್ತಿ ದೇವತೆಗಳಾದ ಸಪ್ತ ಮಾತೃಕೆಯರು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ, ಪೂಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.