ಚಾಮರಾಜನಗರ:ದೇಶ ಅಭಿವೃದ್ಧಿ ಹೊಂದುತ್ತಾ ಹೋದಂತೆ ಜನರ ಆಚಾರ ವಿಚಾರ ಉಡುಗೆ ತೊಡುಗೆ ಎಲ್ಲವೂ ಬದಲಾಗುತ್ತಿದೆ. ಸದ್ಯದ ಮಾಡ್ರನ್ ಜಗತ್ತಿನಲ್ಲಿ ಶಾಲಾ ಮಕ್ಕಳಿಂದ ಹಿಡಿದು ವಯಸ್ಕರರು ಸುಂದರವಾಗಿ ಕಾಣಲಿ ಎಂದು ವಿಧವಿಧವಾದ ಉಡುಪುಗಳನ್ನು ಧರಿಸುವುದು ಮತ್ತು ಬಗೆ ಬಗೆಯ ಹೇರ್ ಕಟ್ಗಳನ್ನು ಮಾಡಿಸಿಕೊಂಡು ಆಕರ್ಷಕವಾಗಿ ಕಾಣಿಸಲು ಪ್ರಯತ್ನಿಸುತ್ತಾರೆ.
ಚಾಮರಾಜನಗರದಲ್ಲೂ ವಿಚಿತ್ರ ಹೇರ್ಕಟ್ ಹಾವಳಿ ಹೆಚ್ಚಾಗಿದ್ದು ಶಾಲಾ ಮಕ್ಕಳು ನಾನಾ ಬಗೆಯ ಕಟಿಂಗ್ ಮಾಡಿಸಿಕೊಂಡು ಶಾಲೆಗೆ ಬರುತ್ತಿರುವುದರಿಂದ ಶಿಕ್ಷರರೊಬ್ಬರು ಈ ರೀತಿಯ ಹೇರ್ ಕಟ್ ಮಾಡದಂತೆ ಸಲೂನ್ಗಳಿಗೆ ಮನವಿ ಮಾಡಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ ಹೆಬ್ಬುಲಿ, ಪೆಪ್ಸಿ ಸೇರಿದಂತೆ ವಿಚಿತ್ರವಾದ ಹೇರ್ಕಟ್ಗಳನ್ನು ಮಾಡಬೇಡಿ ಎಂದು ಶಿಕ್ಷಕರೊಬ್ಬರು ಸವಿತಾ ಸಮಾಜದ ಸಂಘದ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಕೊಳ್ಳೇಗಾಲದ ಬಾಪುನಗರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶಾಂತರಾಜು ಎಂಬವರು ಈ ಪತ್ರವನ್ನು ಬರೆದು ಸವಿತಾ ಸಮಾಜ ಸಂಘದ ಅಧ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಶಿಸ್ತು ಬದ್ಧವಾದ ಹೇರ್ ಕಟಿಂಗ್ ಮಾಡಲು ಹೇರ್ ಸಲೂನ್ಗಳಿಗೆ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಚಿತ್ರ ವಿಚಿತ್ರ ಕಟಿಂಗ್ಗೆ ಬೇಸರ:ಶಾಲಾ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಹೆಬ್ಬುಲಿ ಕಟಿಂಗ್, ಪೆಪ್ಸಿ ಕಟಿಂಗ್, ಚೈನಾ ಕಟಿಂಗ್ ಎಂದು ವಿಚಿತ್ರವಾದ ಹೇರ್ ಸ್ಟೈಲ್ ಮಾಡಿಕೊಂಡು ಬರುತ್ತಿದ್ದು, ನೋಡಲು ಹಿಂಸೆ ಆಗುತ್ತಿದೆ ಎಂದು ಕೊಳ್ಳೇಗಾಲ ಸವಿತಾ ಸಮಾಜದ ಸಂಘದ ಅಧ್ಯಕ್ಷ ರಾಚಶೆಟ್ಟಿ ಅವರಿಗೆ ಕೋರಿಕೊಂಡಿದ್ದಾರೆ. ಈಗಾಗಲೇ, ಸಾಕಷ್ಟು ಬಾರಿ ಹೇಳಿದರೂ, ಪಾಲಕರಿಗೆ ಚಿತ್ರ ವಿಚಿತ್ರ ಕಟಿಂಗ್ ಮಾಡಿಸಬೇಡಿ ಎಂದು ತಿಳಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈ ರೀತಿ ಕಟಿಂಗ್ ಮಾಡಿಸಿಕೊಂಡು ಬರುವುದು ಶಾಲಾ ವಾತಾವರಣಕ್ಕೆ ಅಪಹಾಸ್ಯದ ರೀತಿ ಆಗುತ್ತಿದ್ದು ಸಲೂನ್ ಶಾಪ್ಗಳಿಗೆ ಈ ಬಗ್ಗೆ ಆದೇಶ ಕೊಟ್ಟು ವಿದ್ಯಾರ್ಥಿಗಳಿಗೆ ಹೆಬ್ಬುಲಿ ಕಟಿಂಗ್ ಮಾಡಬಾರದು ಎಂದು ಸೂಚಿಸಿ ಎಂದು ಮನವಿ ಮಾಡಿದ್ದಾರೆ.
ಈ ಸಂಬಂಧ ಶಾಂತರಾಜು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳ ಜೀವನ ಶಿಸ್ತಿನಿಂದ ಕೂಡಿರಬೇಕು ಎಂಬ ಕಾರಣಕ್ಕೆ ಪತ್ರ ಬರೆದಿದ್ದೇನೆ, ಅದಕ್ಕೆ ಸಂಘವೂ ಮೀಟಿಂಗ್ ಕರೆದಿದ್ದು ಎಲ್ಲಾ ಸಲೂನ್ ನವರಿಗೂ ಈ ಬಗ್ಗೆ ಸೂಚನೆ ಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ತಮ್ಮಿಚ್ಛೆಯ ಕಟಿಂಗ್ ಮಾಡಿಸಿಕೊಳ್ಳಲಿ. ಆದರೆ, ಶಾಲಾ ವಿದ್ಯಾರ್ಥಿಗಳು ಚಿತ್ರ-ವಿಚಿತ್ರ ಕಟಿಂಗ್ ಮಾಡಿಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ:ಏನಿದು ಫೈರ್ ಹೇರ್ ಕಟ್? ಇದನ್ನು ಮಾಡಿಸಲು ಹೋಗಿ ಆಸ್ಪತ್ರೆ ಸೇರಿದ ಯುವಕ