ಚಾಮರಾಜನಗರ: ಉಯ್ಯಾಲೆಯಲ್ಲಿ ಆಟ ಆಡುತ್ತಿದ್ದ ಶಿಕ್ಷಕಿ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯಲ್ಲಿ ನಡೆದಿದೆ. ಶಿಕ್ಷಕಿ ಕೆ.ಪುಟ್ಟಿ(53) ಮೃತರು. ಪುಟ್ಟಿ ಅವರು ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಹಾಗೂ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಸಂಘದ ತಾಲೂಕು ಅಧ್ಯಕ್ಷರು ಕೂಡ ಆಗಿದ್ದರು.
ಮಂಗಳವಾರ ಸಂಜೆ ಮನೆಯ ಮೇಲೆ ಉಯ್ಯಾಲೆ ಆಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಶಿಕ್ಷಕಿ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಮನೆಯವರು ಅವರನ್ನು ಮೇಲೆತ್ತಿ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಆದರೆ, ಚಿಕಿತ್ಸೆ ಫಲಿಸದೇ ಗುರುವಾರ ರಾತ್ರಿ ಶಿಕ್ಷಕಿ ಮೃತಪಟ್ಟಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಳ್ಳೇಗಾಲದ ಇತರೆ ಸುದ್ದಿಗಳು:
ಕಾಡು ಕುರಿ ಬೇಟೆಯಾಡಿದ್ದನ ಬಂಧನ:ಕಾಡು ಕುರಿಯನ್ನು ಬೇಟೆ ಆಡಿ ಮಾಂಸ ಮಾರಾಟ ಮಾಡಲು ಯತ್ನಿಸುವಾಗ ವ್ಯಕ್ತಿ ಸಿಕ್ಕಿ ಬಿದ್ದಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಜಾಗೇರಿಯ ದೋಮಿದೀನ್ ಬಂಧಿತ ಆರೋಪಿ. ಜಾಗೇರಿ ಅರಣ್ಯ ಪ್ರದೇಶದಲ್ಲಿ ಈತ ಕಾಡು ಕುರಿ ಬೇಟೆಯಾಡಿ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕಾಡು ಕುರಿ ಮಾಂಸ, ಒಂದು ನಾಡ ಬಂದೂಕು ಹಾಗೂ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.