ಕೊಳ್ಳೇಗಾಲ(ಚಾಮರಾಜನಗರ):ಯುದ್ಧಪೀಡಿತ ರಾಷ್ಟ್ರದಿಂದ ತಾಯ್ನಾಡಿಗೆ ಹಿಂದಿರುಗಲು ಮತ್ತು ಅಲ್ಲಿರುವ ನರಕಸದೃಶ್ಯ ಪರಿಸ್ಥಿತಿ, ಭಾರತೀಯರಿಗೆ ಅಲ್ಲಿನ ರಾಯಭಾರ ಕಚೇರಿ ನೀಡಿದ ಸೂಚನೆಯ ಬಗ್ಗೆ ಉಕ್ರೇನ್ನಿಂದ ಭಾರತಕ್ಕೆ ನಿನ್ನೆ ರಾತ್ರಿ ವಾಪಸ್ ಆದ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ವೈದ್ಯಕೀಯ ವಿದ್ಯಾರ್ಥಿನಿ ಭೂಮಿಕಾ ಮಾತನಾಡಿದ್ದಾರೆ.
ಫೆ.15 ರಂದು ಆದಷ್ಟು ಬೇಗ ಉಕ್ರೇನ್ ತೊರೆಯುವಂತೆ ಅಲ್ಲಿನ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಸಲಹೆ ನೀಡಿದ್ದರು. ಆದರೆ, ನಾವು ಆ ಸಲಹೆಯನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ, 21 ರ ಬಳಿಕ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿತು. ನಮ್ಮಲ್ಲಿ ಆತಂಕ ಹೆಚ್ಚಾಯಿತು. ಉಕ್ರೇನ್ನಿಂದ ಭಾರತಕ್ಕೆ ಬರುವವರೆಗೂ ನಮ್ಮ ತ್ರಿವರ್ಣ ಧ್ವಜವೇ ನಮಗೆ ಶ್ರೀರಕ್ಷೆಯಾಗಿತ್ತು ಎಂದು ಭೂಮಿಕಾ ಹೇಳಿದರು.
ಯುದ್ಧ ಪ್ರಾರಂಭವಾಗಿ ನಾಲ್ಕೈದು ದಿನಗಳ ನಂತರ ನಾಗರಿಕರ ಮೇಲೂ ದಾಳಿ ನಡೆಯಲು ಪ್ರಾರಂಭವಾಯಿತು. ಆಗ ಮತ್ತಷ್ಟು ಆತಂಕಕ್ಕೀಡಾದೆವು. ಕೀವ್ನಿಂದ ಪೋಲ್ಯಾಂಡ್ಗೆ ಬರುವವರೆಗೂ 70 ಮಂದಿ ಭಾರತೀಯ ವಿದ್ಯಾರ್ಥಿಗಳು ದೇಶದ ಬಾವುಟ ಹಿಡಿದು ಬಂದಿದ್ದರಿಂದ ಸುರಕ್ಷಿತವಾಗಿ ನಾವು ಗಡಿ ತಲುಪಿದೆವು. ಅಲ್ಲಿಯವರೆಗೂ ಏನಾಗುತ್ತೆ ಎಂಬ ಆತಂಕ ಇತ್ತು. ನಂತರ ಭಾರತೀಯ ರಾಯಭಾರ ಕಚೇರಿ ನಮ್ಮ ದೇಶಕ್ಕೆ ಬರುವ ಎಲ್ಲಾ ವ್ಯವಸ್ಥೆ ಮಾಡಿತ್ತು. ಯಾವುದೇ ಆತಂಕವಿಲ್ಲದೆ ನಮ್ಮ ದೇಶಕ್ಕೆ ಬಂದಿಳಿದೆವು ಎಂದು ವಿವರಿಸಿದರು.