ಚಾಮರಾಜನಗರ : ಕೊರೊನಾ ಭೀತಿ ನಡುವೆಯೂ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಸಾಂಪ್ರದಾಯಿಕ ಗೊರೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಗಣಿ ಯನ್ನು ಕೈಯಲ್ಲಿ ಮುಟ್ಟಿಲು ಹಲವರು ಹಿಂಜರಿಯುತ್ತಾರೆ. ಗುಮಟಾಪುರ ಗ್ರಾಮಸ್ಥರು ಸೆಗಣಿಯ ರಾಶಿಯಲ್ಲೇ ಹೊರಲಾಡಿ, ಎರಚಾಡಿಕೊಳ್ಳುತ್ತಾರೆ. ಗ್ರಾಮದ ಸಹಬಾಳ್ವೆಯನ್ನು ಬೆಸೆಯುವ ಈ ವಿಶಿಷ್ಟ ಆಚರಣೆಯನ್ನು ಗೊರೆ ಹಬ್ಬ ಎನ್ನಲಾಗುತ್ತದೆ. ಈ ಬಾರಿ ಕೊರೊನಾ ಭೀತಿಯ ನಡುವೆಯೂ ಸಾವಿರಾರು ಮಂದಿ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡರು.
ಸಗಣಿಯಲ್ಲಿ ಹೊಡೆದಾಡಿದ ತಮಿಳುನಾಡಿನ ಕನ್ನಡಿಗರು ಪ್ರತಿ ವರ್ಷ ದೀಪಾವಳಿ ಬಲಿಪಾಡ್ಯಮಿಯ ಮಾರನೇ ದಿನ ಈ ಹಬ್ಬ ನಡೆಯುತ್ತದೆ. ಜಾತಿ, ಮತ ಬೇಧವಿಲ್ಲದೆ ಗ್ರಾಮದ ಪ್ರತಿಯೊಬ್ಬರು ಸೆಗಣಿ ಶೇಖರಿಸಿ, ಪರಸ್ಪರ ಎರಚಾಡುತ್ತಾರೆ. ದೀಪಾವಳಿ ಹಬ್ಬ ಬರುವುದನ್ನೇ ಕಾಯುವ ಇಲ್ಲಿನ ಯುವಕರು, ಎಲ್ಲಿಲ್ಲದ ಹುಮ್ಮಸ್ಸಿನಿಂದ ಸಗಣಿ ಎರಚಾಡುವ ಮೂಲಕ ಸಂಭ್ರಮಿಸುತ್ತಾರೆ. ಮಧ್ಯಾಹ್ನ ಪ್ರಾರಂಭಿಸಿ ಸುಮಾರು ಒಂದುವರೆ ತಾಸುಗಳ ಕಾಲ ನೂರಾರು ಯುವಕರು, ಹಿರಿಯರು ಸೆಗಣಿಯ ಉಂಡೆ ಕಟ್ಟಿ ಪರಸ್ಪರ ಹೊಡೆದಾಡುವ ಮೂಲಕ ಕುಶಿ ಪಡುತ್ತಾರೆ.
ಆಚರಣೆಯ ಹಿನ್ನೆಲೆ : ಗ್ರಾಮದ ಬೀರೇಶ್ವರ ಸ್ವಾಮಿಯ ಇಷ್ಟಾರ್ಥವಾಗಿ ಈ ಗೊರೆ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿರಿಯರ ಪ್ರಕಾರ, ಗ್ರಾಮದ ಕಾಳೇಗೌಡ ಎಂಬವರ ಮನೆಗೆ ಉತ್ತರ ದೇಶದಿಂದ ದೇವರ ಗುಡ್ಡನೊಬ್ಬ ಬಂದಿದ್ದ, ಅವನು ಸತ್ತ ಮೇಲೆ ಅವನ ಜೋಳಿಗೆ, ಬೆತ್ತ, ಎಲ್ಲವನ್ನು ತಿಪ್ಪೆ ಗುಂಡಿಗೆ ಬಿಸಾಕಿದರಂತೆ. ಕೆಲ ದಿನಗಳ ನಂತರ ಆ ತಿಪ್ಪೆಗುಂಡಿ ಬಳಿಗೆ ಎತ್ತಿನ ಗಾಡಿಯೊಂದು ಹೋದಾಗ ಲಿಂಗವೊಂದು ಕಾಣಿಸಿಕೊಂಡಿತು. ಗಾಡಿಯ ಚಕ್ರ ಲಿಂಗದ ಮೇಲೆ ಹರಿದಾಗ ಅದರಿಂದ ರಕ್ತ ಬಂದಿತ್ತಂತೆ. ಆಗ ಗ್ರಾಮದ ಮುಖಂಡರ ಕನಸಿನಲ್ಲಿ ದೇವರ ಗುಡ್ಡಪ್ಪ ಕಾಣಿಸಿಕೊಂಡು ದೀಪಾವಳಿ ಹಬ್ಬದ ಮರುದಿನ ಗೊರೆಹಬ್ಬ ಮಾಡುವಂತೆ ಹೇಳಿದರು ಎಂಬ ಪ್ರತೀತಿಯಿದೆ.
ಲಿಂಗ ಕಾಣಿಸಿಕೊಂಡ ತಿಪ್ಪೆಗುಂಡಿಯಲ್ಲೇ ಈಗಿನ ಬೀರಪ್ಪನ ದೇವಸ್ಥಾನ ಕಟ್ಟಿ ಗೊರೆಹಬ್ಬವನ್ನು ಆಚರಿಸಲಾಗುತ್ತಿದೆ. ಹಬ್ಬ ಆರಂಭಕ್ಕೂ ಮುನ್ನ, ಕೆರೆಯಂಗಳದಲ್ಲಿ ಕತ್ತೆಯನ್ನು ತೊಳೆದು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಗಣಿ ಎರಚಾಡುವ ಬೀರಪ್ಪನ ಗುಡಿವರಗೆ ಕರೆ ತರಲಾಗುತ್ತದೆ. ನಂತರ ಕತ್ತೆಯನ್ನು ತೊಳೆಯಲಾಗಿದ್ದ ಕೆರೆಯಲ್ಲಿ ಎಲ್ಲರು ಸ್ನಾನ ಮಾಡಿಕೊಂಡು ಊರಿಗೆ ಬರುವಾಗ ಚಾಡಿಕೋರನನ್ನು ಹಿಯಾಳಿಸುತ್ತಾ, ಊರ ಗೌಡನನ್ನು ಅಶ್ಲೀಲ ಶಬ್ದಗಳಿಂದ ಬೈಯುತ್ತಾ ಸಂಭ್ರಮಿಸಿ ಕೇಕೆ ಹಾಕುವುದು ನಡೆದುಕೊಂಡ ಬಂದ ರೂಢಿಯಾಗಿದೆ.
ಗೊರೆಹಬ್ಬ ಆಚರಿಸಿ ಬೀರೇಶ್ವರನನ್ನು ಬೇಡಿಕೊಂಡರೆ ಒಳಿತಾಗಲಿದೆ ಎಂಬುವುದು ಜನರ ನಂಬಿಕೆಯಾಗಿದೆ. ತಮ್ಮ ಗ್ರಾಮದಲ್ಲಿ ಚಾಡಿಕೋರ ಇರಬಾರದು, ಸಹೋದರತೆ-ಸಹಬಾಳ್ವೆ ಹಸಿರಾಗಿರಲೆಂಬ ರೂಪಕವಿರುವ ಈ ಹಬ್ಬ ನಿಜಕ್ಕೂ ಒಂದು ವಿಶಿಷ್ಟವೇ ಸರಿ.