ಕರ್ನಾಟಕ

karnataka

ETV Bharat / state

ದಂತಕಥೆಯಾದ ದಂತಚೋರ: ವೀರಪ್ಪನ್ ಬಗ್ಗೆ ರೋಮಾಂಚಕ ಪುಸ್ತಕ ಬರೆದ ಪೊಲೀಸ್ ಅಧಿಕಾರಿ..! - ಕಾಡುಗಳ್ಳ ವೀರಪ್ಪನ್ ಬಗ್ಗೆ ಪುಸ್ತಕ

ಕಾಡುಗಳ್ಳ ವೀರಪ್ಪನ್ ಕುರಿತು ನಿವೃತ್ತ ಪೊಲೀಸ್‌ ಅಧಿಕಾರಿ ಡಾ.ಡಿ.ವಿ. ಗುರುಪ್ರಸಾದ್ ಅವರು 'ದಂತಕಥೆಯಾದ ದಂತಚೋರ' ಪುಸ್ತಕ ಬರೆದಿದ್ದು, ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

A retired police officer who has written a book on Veerappan
ವೀರಪ್ಪನ್ ಬಗ್ಗೆ ಪುಸ್ತಕ ಬರೆದ ನಿವೃತ್ತ ಪೊಲೀಸ್‌ ಅಧಿಕಾರಿ

By

Published : Oct 11, 2020, 10:21 PM IST

Updated : Oct 11, 2020, 10:43 PM IST

ಚಾಮರಾಜನಗರ :ಎರಡು ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದ ಕಾಡುಗಳ್ಳ ವೀರಪ್ಪನ್ ಕುರಿತು ನಿವೃತ್ತ ಪೊಲೀಸ್‌ ಅಧಿಕಾರಿ ಡಾ.ಡಿ.ವಿ. ಗುರುಪ್ರಸಾದ್ ಅವರು 'ದಂತಕಥೆಯಾದ ದಂತಚೋರ' ಎಂಬ ಪುಸ್ತಕ ಬರೆದಿದ್ದು, ಚಾಮರಾಜನಗರದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.

ಪುಸ್ತಕದ ಕುರಿತು ಲೇಖಕ ಡಿ.ವಿ. ಗುರುಪ್ರಸಾದ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, 1 ವರ್ಷ 9 ತಿಂಗಳು ತಮಿಳುನಾಡು ಹಾಗೂ ರಾಜ್ಯದಲ್ಲಿ ತಿರುಗಾಡಿ 300 ಮಂದಿಗೂ ಹೆಚ್ಚು ಜನರನ್ನು ಸಂದರ್ಶಿಸಿ ವೀರಪ್ಪನ್ ನಡೆಸಿದ ಕೃತ್ಯಗಳಲ್ಲಿ ದಾಖಲಾದ ದೂರು, ಎಫ್ಐಅರ್, ಚಾರ್ಜ್ ಶೀಟ್, ನ್ಯಾಯಾಲಯದ ಆದೇಶಗಳನ್ನು ಅಧ್ಯಯನ ಮಾಡಿ ಬರೆದ ಪುಸ್ತಕ ಇದಾಗಿದೆ. ಯಾವುದೇ ಊಹಾಪೋಹಗಳನ್ನು ಸೇರಿಸದೆ, ಅಧಿಕೃತ ದಾಖಲೆಗಳನ್ನಿಟ್ಟುಕೊಂಡು ವೀರಪ್ಪನ್ ಬಗ್ಗೆ ಬರೆದ ಮೊದಲ ಕೃತಿ ಇದಾಗಿದೆ. ಆತನ ಹುಟ್ಟಿನಿಂದ ಮರಣದವರೆಗಿನ ಎಲ್ಲಾ ಮಾಹಿತಿಗಳು ಇದರಲ್ಲಿ ಅಡಕವಾಗಿದ್ದು, 350 ಪುಟಗಳಷ್ಟಿರುವ ಸಂಶೋಧನಾ ಪುಸ್ತಕ ಎಂದರು.

ವೀರಪ್ಪನ್​ನಿಂದ ಕಿಡ್ನಾಪ್ ಆದ ಕೃಪಾಕರ್-ಸೇನಾನಿ, ಆತನಿಂದ ತಪ್ಪಿಸಿಕೊಂಡು ಬಂದ ನಾಗಪ್ಪ ಮಾರಡಗಿ, ದಂತಚೋರನ ಮೊದಲ ಫೋಟೋ ತೆಗೆದ ಶಿವಸುಬ್ರಹ್ಮಣ್ಯ, ಹೀಗೆ ವೀರಪ್ಪನ್ ಅಟ್ಟಹಾಸದಲ್ಲಿ ಸಿಕ್ಕಿಹಾಕಿಕೊಂಡವರು, ಆತನ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರು, ಒಡನಾಡಿಗಳು, ಹೆಂಡತಿ ಮುತ್ತುಲಕ್ಷ್ಮಿ ಅವರನ್ನು ಸಂದರ್ಶಿಸಿ ಕೃತಿ ಹೊರಬಂದಿದೆ. ಈ ಹಿಂದೆ ಸುದ್ದಿಯಾಗದ, ಗೊತ್ತಿರದ ಅನೇಕ ಸಂಗತಿಗಳು ಪುಸ್ತಕದಲ್ಲಿರಲಿದೆ. ಇದೇ ವಿಜಯದಶಮಿಯಂದು ಚಾಮರಾಜನಗರದಲ್ಲಿ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರಿಂದ ಕೃತಿ ಲೋಕಾರ್ಪಣೆ ಮಾಡಿಸಬೇಕೆನ್ನುವ ಯೋಜನೆಯಿತ್ತು. ದುರಾದೃಷ್ಟವಶಾತ್ ಅವರು ಅನಾರೋಗ್ಯಕ್ಕೀಡಾಗಿರುವುದರಿಂದ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಬಹುದು. ಅಂದಿನ ಕಾರ್ಯಕ್ರಮಕ್ಕೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳನ್ನು ಕರೆತರಬೇಕೆಂಬುದು ನನ್ನಾಸೆಯಾಗಿದೆ ಎಂದು ಡಾ.ಡಿ.ವಿ ಗುರುಪ್ರಸಾದ್ ತಿಳಿಸಿದರು.

ಒಂದೇ ಗುಕ್ಕಿಗೆ ಓದಿಸಿತು : ಇನ್ನು, ಪುಸ್ತಕದ ಬಗ್ಗೆ ಸಚಿವ ಸುರೇಶ್ ಕುಮಾರ್ ಫೇಸ್ ಬುಕ್​ನಲ್ಲಿ ಬರೆದುಕೊಂಡಿದ್ದು, ವೀರಪ್ಪನ್ ಕುರಿತು ಪೊಲೀಸ್ ಅಧಿಕಾರಿಗಳು ಬರೆದಿದ್ದ ಪುಸ್ತಕಗಳನ್ನು ಓದಿದ್ದೆ. ಆದರೆ, ಗುರುಪ್ರಸಾದ್ ಅವರ ಪುಸ್ತಕ ವಿಶಿಷ್ಟವಾಗಿದೆ. ಯಾವುದೇ ರಾಗ-ದ್ವೇಷವಿಲ್ಲದೆ, ವೀರಪ್ಪನ್ ವ್ಯಕ್ತಿತ್ವವನ್ನು ಅವನ ಎಲ್ಲಾ ಓರೆ-ಕೋರೆಗಳ ಸಹಿತ ನಮ್ಮ ಮುಂದೆ ಪ್ರಸ್ತುತ ಪಡಿಸಿದ್ದಾರೆ. ಮುಂದಿನ ಪೀಳಿಗೆಗೆ ವೀರಪ್ಪನ್ ಯಾರು, ಅವನ ಕಾರ್ಯಾಚರಣೆ ಎಂತಹದಿತ್ತು, ಅವನ ವೈಯಕ್ತಿಕ ಬಲಗಳೇನು, ದೌರ್ಬಲ್ಯಗಳೇನು, ಅಟ್ಟಹಾಸಕ್ಕೆ ಕಾರಣಗಳೇನು, ಪೊಲೀಸ್ ಕಾರ್ಯಾಚರಣೆಯಲ್ಲಿ ಇದ್ದ ಕೊರತೆಗಳೇನು, ವೀರಪ್ಪನ್ ಹಿಡಿಯಲು ಅಷ್ಟು ಕಷ್ಟವಾದದ್ದೇಕೆ? ಎಲ್ಲಾ ವಿಚಾರಗಳನ್ನು ಪ್ರತ್ಯಕ್ಷದರ್ಶಿಗಳ ನೇರ ಮಾತುಗಳಲ್ಲೇ ಪರಿಚಯಿಸಿದ್ದಾರೆ. ಕಾದಂಬರಿ ರೀತಿ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುತ್ತದೆ ಎಂದಿದ್ದಾರೆ.

ಇನ್ನು, ಪುಸ್ತಕಕ್ಕೆ ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ ಮುನ್ನುಡಿ ಬರೆದಿದ್ದು, ವೀರಪ್ಪನ್ ಕಾರ್ಯಾಚರಣೆ ವೇಳೆ ವರದಿಗಾರನಾಗಿ ಹಲವಾರು ಸುದ್ದಿಗಳನ್ನು ಮಾಡಿದ್ದರೂ ನಮಗೇ ಗೊತ್ತಿರದ ಸಾಕಷ್ಟು ಸಂಗತಿಗಳಿವೆ ಎಂದು ಹೇಳುವ ಮೂಲಕ ಕೃತಿಯ ಆಳ-ಅಗಲವನ್ನು ಕಟ್ಟಿಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಬೆನ್ನುಡಿ ಬರೆದಿದ್ದಾರೆ. ವೀರಪ್ಪನ್ ಕುರಿತ ಪರಿಪೂರ್ಣ ಪುಸ್ತಕವೊಂದು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು ಮುಂದಿನ ಪೀಳಿಗೆಗೆ ಆತನ ಕ್ರೌರ್ಯ, ಕಲಿಯಬೇಕಾದ ಪಾಠವನ್ನು ತಿಳಿಸಿಕೊಡಲಿದೆ.

Last Updated : Oct 11, 2020, 10:43 PM IST

ABOUT THE AUTHOR

...view details