ಚಾಮರಾಜನಗರ: ಒಂದನೇ ತರಗತಿಯಿಂದಲೇ ಎಂದಿನಂತೆ ಪೂರ್ಣ ಪ್ರಮಾಣದ ತರಗತಿಗಳನ್ನು ಆರಂಭಿಸಬೇಕೆಂಬ ಬೇಡಿಕೆ, ಮನವಿಗಳು ಬರುತ್ತಿವೆ. ಮಕ್ಕಳು ಕೂಡ ಇದಕ್ಕೆ ಯೆಸ್ ಎನ್ನುತ್ತಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಪೂರ್ಣ ಪ್ರಮಾಣದ ಶಾಲಾರಂಭ ಕುರಿತಂತೆ ಆರೋಗ್ಯ ಸಚಿವರ ಜತೆ ಸಭೆ : ಸುರೇಶ್ ಕುಮಾರ್ ನಗರದಲ್ಲಿ ಮಾತನಾಡಿ ಅವರು, 8 ಹಾಗೂ 9 ಹಾಗೂ ಪ್ರಥಮ ಪಿಯು ಆಫ್ ಲೈನ್ ತರಗತಿಗಳನ್ನು ಆರಂಭಿಸುವಂತೆ ರಾಜ್ಯದ ವಿವಿಧೆಡೆಯಿಂದ ಮನವಿಗಳು ಬರುತ್ತಿವೆ. ನಾಡಿದ್ದು ಆರೋಗ್ಯ ಸಚಿವರ ಜೊತೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ವಿದ್ಯಾಗಮ, ಯೂಟ್ಯೂಬ್, ಚಂದನದ ಮೂಲಕ ತಕ್ಕಮಟ್ಟಿಗೆ ವಿದ್ಯಾರ್ಥಿಗಳು ಕಲಿತಿದ್ದಾರೆ. ಎಲ್ಲಾ ಭಾಗಗಳಲ್ಲಿ ಮಕ್ಕಳು ಯಾವ ರೀತಿ ಕಲಿತಿದ್ದಾರೆ, ಎಷ್ಟು ಕಲಿತಿದ್ದಾರೆ ಎಂದು ಅರಿಯಲು ಎಲ್ಲಾ ಶಾಲೆಗಳಿಗೆ ಸೂತ್ರವನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಂತಿಯುತ ಮೆರವಣಿಗೆಗೆ ಅವಕಾಶ:
ಇದೇ ವೇಳೆ, ರೈತರ ಟ್ರ್ಯಾಕ್ಟರ್ ಪರೇಡ್ ಕುರಿತು ಪ್ರತಿಕ್ರಿಯಿಸಿದ ಸಚಿವರು, ಶಾಂತಿಯುತವಾಗಿ ಮೆರವಣಿಗೆ ಮಾಡಲು ದೆಹಲಿ, ಬೆಂಗಳೂರಿನಲ್ಲಿ ಅನುಮತಿ ನೀಡಲಾಗಿದೆ. ಅವರ ಬೇಡಿಕೆಗೆ ಸಾಕಷ್ಟು ಸುತ್ತು ಮಾತುಕತೆ ನಡೆಸಲಾಗಿದೆ, ನಾವು ಹೇಳುವುದನ್ನೆಲ್ಲಾ ಸ್ಪಷ್ಟವಾಗಿ ಹೇಳಿದ್ದೇವೆ. ಕಾಯ್ದೆಯ ಲೋಪಗಳೇನು ಎಂದು ತಿಳಿಸಿಯೂ ಇದ್ದೇವೆ. ಆದರೆ, ರೈತ ಮುಖಂಡರು ಕಾಯ್ದೆಗಳನ್ನೇ ವಾಪಸ್ ಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ರೂಪಿಸಿದ ಸಮಿತಿ ವರದಿ ಕೊಟ್ಟ ಬಳಿಕ ಮುಂದಿನ ನಿರ್ಧಾರ ಎಂದರು.