ಚಾಮರಾಜನಗರ :ಗರ್ಭಿಣಿಯೊಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಬರುತ್ತಿದ್ದ ವೇಳೆ ಆ್ಯಂಬುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೊಳ್ಳೇಗಾಲದ ಮಧುವನಹಳ್ಳಿಯಲ್ಲಿ ಇಂದು ನಡೆದಿದೆ.
ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಶೇಷಣ್ಣ ಎಂಬುವರ ಪತ್ನಿ ಜ್ಯೋತಿ ಆ್ಯಂಬುಲೆನ್ಸ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ತಾಯಿ. ಜ್ಯೋತಿ ಅವರಿಗೆ ಇಂದು ಮಧ್ಯಾಹ್ನ ಹೆರಿಗೆ ನೋವು ಕಾಣಿಸಿದ ಹಿನ್ನೆಲೆಯಲ್ಲಿ ಕೌದಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಆದರೆ, ಜ್ಯೋತಿ ಅವರ ದೇಹದಲ್ಲಿ ರಕ್ತ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯಾಧಿಕಾರಿಗಳು ಸಲಹೆ ನೀಡಿದ್ದರಿಂದ, ಆ್ಯಂಬುಲೆನ್ಸ್ನಲ್ಲಿ ಕರೆತರುವಾಗ ಮಾರ್ಗಮಧ್ಯೆಯೇ ಹೆರಿಗೆಯಾಗಿದೆ.
ಆರೋಗ್ಯ ಸಿಬ್ಬಂದಿ ತಾಯಿ ಮತ್ತು ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ.
ಇದನ್ನೂ ಓದಿ:ತಜ್ಞರ ವರದಿ.. ಕೋವಿಡ್ 3ನೇ ಅಲೆಯಿಂದ 18 ವರ್ಷದೊಳಗಿನ ಮಕ್ಕಳು ಬಚಾವ್!