ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯ ಜನ ಇಂದು ಬೆಚ್ಚಿ ಬಿದ್ದಿದ್ದಾರೆ. ಗನ್ನಿಂದ ಶೂಟ್ ಮಾಡಿ ತನ್ನ ಕುಟುಂಬದ ನಾಲ್ವರನ್ನು ಕೊಂದ ವ್ಯಕ್ತಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಬೆಚ್ಚಿಬೀಳಿಸುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಗುಂಡ್ಲುಪೇಟೆಯ ಬಳಿ ಇರುವ ಊಟಿ ರಸ್ತೆಯಲ್ಲಿರುವ ಮೈಸೂರು ವಿವಿ ನಿವೃತ್ತ ಪ್ರೊಫೆಸರ್ ಮಹೇಶ್ ಚಂದ್ರಗುರು ಅವರ ಸಂಬಂಧಿಕರಿಗೆ ಸೇರಿದ ಜಮೀನಿನಲ್ಲಿ ಮಧ್ಯರಾತ್ರಿ 2 ಗಂಟೆ ಸಮಯಕ್ಕೆ ಈ ಘಟನೆ ನಡೆದಿದೆ. ತಂದೆ-ತಾಯಿ, ತನ್ನ ಪತ್ನಿ, ಮಗನಿಗೆ ಗುಂಡು ಹಾರಿಸಿದ ಮೈಸೂರಿನಲ್ಲಿ ಡಾಟಾ ಬೇಸ್ ಕಂಪನಿ ನಡೆಸುತ್ತಿದ್ದ ಓಂ ಪ್ರಕಾಶ್ (35) ಬಳಿಕ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲ ಮೈಸೂರಿನ ದಟ್ಟಗಳ್ಳಿಯಲ್ಲಿ ವಾಸವಾಗಿದ್ದರು. ಓಂ ಪ್ರಕಾಶ್ ತನ್ನ ತಂದೆ-ನಾಗರಾಜಭಟ್ರು (60), ತಾಯಿ- ಹೇಮಾಲತಾ (50), ಪತ್ನಿ- ನಿಖಿತಾ, ಮಗ- ಆರ್ಯನ್ (4) ರನ್ನು ಗನ್ನಿಂದ ಶೂಟ್ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಓಂಕಾರ್.