ಚಾಮರಾಜನಗರ:ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಏಕಾಏಕಿ ಚಿರತೆಯೊಂದು ದಾಳಿ ನಡೆಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಿರತೆ ದಾಳಿಯಿಂದಾಗಿ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂತಹದ್ದೊಂದು ಭಯಾನಕ ಘಟನೆ ನಡೆದಿದ್ದು ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ. ಸೋಮವಾರ ರಾತ್ರಿ 9 ಗಂಟೆ ಸಮಯದಲ್ಲಿ ಈ ದಾಳಿ ನಡೆದಿದೆ.
ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದ ಸುಶೀಲಾ (6) ತೀವ್ರ ಗಾಯಗೊಂಡಿರುವ ಬಾಲಕಿಯಾಗಿದ್ದು, ಚಿರತೆ ದಾಳಿಯಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಅಷ್ಟೇ ಅಲ್ಲ ಒಬ್ಬಬ್ಬರೇ ಹೊರಗೆ ಓಡಾಡಲು ಹೆದರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ
ಘಟನೆ ನಡೆದಿದ್ದು ಹೇಗೆ? :ಹನೂರು ತಾಲೂಕಿನ ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಗುಂದಿ ಗ್ರಾಮದ ರಾಮು ಹಾಗೂ ಲಲಿತಾ ಎಂಬವರ ಪುತ್ರಿ ಸುಶೀಲಾ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಚಿರತೆಯೊಂದು ಆಟವಾಡುತ್ತಿದ್ದ ಬಾಲಕಿ ಮೇಲೆ ದಾಳಿ ನಡೆಸಿದೆ. ಬಾಲಕಿ ಮೇಲೆ ಇದ್ದಕ್ಕಿದ್ದಂತೆ ಎರಗಿದ ಚಿರತೆ ಸುಶೀಲಾಳನ್ನು ಸುಮಾರು 200 ಮೀಟರ್ ದೂರಕ್ಕೆ ಎಳೆದೊಯ್ದಿದೆ.
ಮಗುವಿನ ಚಿರಾಟ ಕೇಳಿದ ಪೋಷಕರು ಹಾಗೂ ಗ್ರಾಮಸ್ಥರು ಯಾರೋ ಕಳ್ಳರು ಬಂದಿದ್ದಾರೆ ಮಗುವನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ದೊಣ್ಣೆಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಆದರೆ, ಗ್ರಾಮಸ್ಥರ ಕೂಗಾಟ - ಚೀರಾಟದಿಂದ ಬೆದರಿದ ಚಿರತೆ ಮಗುವನ್ನು ಸ್ಥಳದಲ್ಲೇ ಬಿಟ್ಟು ಕಾಡಿನತ್ತ ಪರಾರಿಯಾಗಿದೆ. ಗ್ರಾಮಸ್ಥರು ಬಾಲಕಿಯನ್ನು ಬಿಡಿಕೊಳ್ಳುವಷ್ಟರಲ್ಲೇ ಚಿರತೆ ಮಗುವನ್ನ ಗಾಯಗೊಳಿಸಿತ್ತು. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ 108 ಆಂಬ್ಯುಲೆನ್ಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ತುರ್ತು ವೈದ್ಯಕೀಯ ಸಿಬ್ಬಂದಿ ಮೂರ್ತಿ ಹಾಗೂ ಚಾಲಕ ಲಿಂಗರಾಜು ಪ್ರಥಮ ಚಿಕಿತ್ಸೆ ನೀಡಿ ಕಾಮಗೆರೆ ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನು ದಾಖಲು ಮಾಡಿದ್ದಾರೆ.
ಆಸ್ಪತ್ರೆಗೆ ಬಿ ಆರ್ ಟಿ ಅರಣ್ಯಾಧಿಕಾರಿಗಳು ಭೇಟಿ: ಬಾಲಕಿ ದಾಖಲಾಗಿರುವ ಕಾಮಗೆರೆ ಖಾಸಗಿ ಆಸ್ಪತ್ರೆಗೆ ಬಿ ಆರ್ ಟಿ ಅರಣ್ಯಾಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಶಾಲಾ ವಿದ್ಯಾರ್ಥಿ ಗಾಯಗೊಂಡಿರುವ ಬಗ್ಗೆ ಮಾಹಿತಿ ತಿಳಿದ ಶಿಕ್ಷಕರುಗಳಾದ ಲೋಕೇಶ್ ಹಾಗೂ ಚಂದನ್ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದಾರೆ. ಕಗ್ಗಲಿಗುಂದಿಯಲ್ಲಿ ಸೋಲಿಗರು ಹೆಚ್ಚಿನ ಸಂಖ್ಯೆಯ ವಾಸ ಮಾಡುತ್ತಿದ್ದು, ಮನುಷ್ಯರ ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ:Leopard in Tumkur: ಒಂದೇ ಕಡೆ ಏಕಾಏಕಿ ಮೂರು ಚಿರತೆಗಳು ಪ್ರತ್ಯಕ್ಷ.. ಬೆಚ್ಚಿ ಬಿದ್ದ ತುಮಕೂರು ಮಂದಿ