ಚಾಮರಾಜನಗರ: ವರದಕ್ಷಿಣಿ ಹಿಂಸೆ ಹಾಗೂ ಶೀಲ ಶಂಕಿಸುತ್ತಿದ್ದ ಪತಿಯ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದ ಬಸ್ತೀಪುರದಲ್ಲಿ ನಡೆದಿದೆ. ಹನೂರು ಗ್ರಾ.ಪಂ.ನಲ್ಲಿ ಪಿಡಿಒ ಆಗಿರುವ ಆನಂದ್ ಕಾಂಬ್ಳೆ ಪತ್ನಿ ವಿದ್ಯಾಶ್ರೀ ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ.
ವಿದ್ಯಾಶ್ರೀ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನವಳಾಗಿದ್ದು ಮೂರು ವರ್ಷದ ಹಿಂದೆ ಅದೇ ಜಿಲ್ಲೆಯ ಪಿಡಿಒ ಆನಂದ್ ಕಾಂಬ್ಳೆ ಅವರನ್ನು ವಿವಾಹವಾಗಿದ್ದರು. ಆನಂದ್ ಕಾಂಬ್ಳೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ಪಿಡಿಒ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಈ ದಂಪತಿ ಕೊಳ್ಳೇಗಾಲ ಸಮೀಪದ ಬಸ್ತೀಪುರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ನಿನ್ನೆ ವಿದ್ಯಾಶ್ರೀ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.