ಚಾಮರಾಜನಗರ:ನೇಂದ್ರ ಬಾಳೆ ಬೆಳೆದು ಕೈ ಸುಟ್ಟುಕೊಂಡ ರೈತನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ನಡೆದಿದೆ.
ಬಾಳು ನೀಡಲಿಲ್ಲ 'ಬಾಳೆ' ... ಕೆರೆಗೆ ಹಾರಿ ರೈತ ಆತ್ಮಹತ್ಯೆ - Chamarajanagar farmer commits Suicide
ಸಾಲಬಾಧೆಯಿಂದಾಗಿ ರೈತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದ ಸಿದ್ದಲಿಂಗಸ್ವಾಮಿ (55) ಮೃತ ದುರ್ದೈವಿ. ಮೃತರಿಗೆ 3.5 ಎಕರೆ ಜಮೀನಿದ್ದು, ನೇಂದ್ರಬಾಳೆ ಬೆಳೆದು ಸೂಕ್ತ ಬೆಲೆ ಸಿಗದೇ ಕೈಸುಟ್ಟುಕೊಂಡಿದ್ದರು ಎನ್ನಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಸಾಲದ ಹೊರೆಯಿಂದ ಮಗನನ್ನು ಶಾಲೆ ಬಿಡಿಸಿದ್ದರು ಎಂದು ತಿಳಿದುಬಂದಿದೆ.
ಕಾವೇರಿ ಗ್ರಾಮೀಣ ಬ್ಯಾಂಕ್ ಹಾಗೂ ಕೈಸಾಲ ಸೇರಿ 10 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿಕೊಂಡು ದಿಕ್ಕುತೋಚದಂತಾಗಿ ಗುರುವಾರ ರಾತ್ರಿ ಬೆಂಡರವಾಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.