ಚಾಮರಾಜನಗರ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ ಚಾಮರಾಜನಗರ ಮಕ್ಕಳ ಸ್ನೇಹಿ ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಕೊಳ್ಳೇಗಾಲದ ಭೀಮನಗರ ನಿವಾಸಿ ಶಿವಕುಮಾರ್(37) ಶಿಕ್ಷೆಗೊಳಗಾದ ಅಪರಾಧಿ. ಅಪ್ರಾಪ್ತ ಬಾಲಕಿಯನ್ನು ಹಿಡಿದು ಎಳೆದೊಯ್ದು ಮಾನಭಂಗ ಮಾಡುವ ಉದ್ದೇಶದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದ. ಜೊತೆಗೆ, ಇದನ್ನು ಪ್ರಶ್ನಿಸಿದ ಬಾಲಕಿಯ ಪಾಲಕರಿಗೂ ಕೊಲೆ ಬೆದರಿಕೆ ಹಾಕಿದ್ದನು.
ಘಟನೆ ಸಂಬಂಧ 2021 ರ ಜನವರಿ 1 ರಂದು ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿವಕುಮಾರ್ ವಿರುದ್ಧ ಎಲ್ಲ ಆರೋಪಗಳು ಸಾಬೀತಾದ್ದರಿಂದ ನ್ಯಾ.ನಿಶಾರಾಣಿ ಅಪರಾಧಿಗೆ 2 ವರ್ಷ ಶಿಕ್ಷೆ ವಿಧಿಸಿ, ಸಂತ್ರಸ್ತ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರವು 2 ಲಕ್ಷ ರೂ. ಹಣವನ್ನು ಪರಿಹಾರ ರೂಪದಲ್ಲಿ ಕೊಡಬೇಕು ಎಂದು ಸೂಚಿಸಿದ್ದಾರೆ.
ವನ್ಯಪ್ರಾಣಿಗಳ ದಾಳಿಗೆ ಮರಿ ಆನೆ ಬಲಿ:ಹುಲಿ ಇಲ್ಲವೇ ಸೀಳುನಾಯಿಗಳ ದಾಳಿಗೆ ಮರಿಯಾನೆ ಬಲಿಯಾಗಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯ ವ್ಯಾಪ್ತಿಯಲ್ಲಿ ನಡೆದಿದೆ. ಕುಂದುಕೆರೆ ವಲಯದ ಕಡಬೂರು ಗಸ್ತಿನ ಕೋಟೆಗೆರೆ ಕೆರೆಹಳ್ಳದ ಪಕ್ಕದಲ್ಲಿ 3-4 ವರ್ಷದ ಹೆಣ್ಣಾನೆ ಮರಿಯು ಮೃತಪಟ್ಟಿದ್ದು, ವನ್ಯಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಖಚಿತ ಪಡಿಸಿದೆ.