ಬೆಂಗಳೂರು:ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಎಂಟು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಹಿಂಬಡ್ತಿ ಎಂಬ ಸುದ್ದಿ ಹಿನ್ನೆಲೆ ನ್ಯಾಯಾಲಯದ ಆದೇಶವನ್ನು ಇನ್ನಷ್ಟು ವಿಸ್ತೃತವಾಗಿ ಗಮನಿಸಬೇಕಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹೇಳಿಕೆ ಬಿಡುಗಡೆ ಮಾಡಿರುವ ಸಚಿವ ನ್ಯಾಯಾಲಯದ ತೀರ್ಪನ್ನು ಇನ್ನಷ್ಟು ತಾಂತ್ರಿಕವಾಗಿ ಆಲೋಚಿಸಬೇಕಾದ ಅನಿವಾರ್ಯತೆ ಇದ್ದು, ಈ ಹಂತದಲ್ಲಿ ಯಾವುದೇ ಶಿಕ್ಷಕರೂ ಅನಗತ್ಯ ಗೊಂದಲಕ್ಕೀಡಾಗುವುದು ಬೇಡ ಎಂದಿದ್ದಾರೆ.
ಪ್ರೌಢಶಾಲಾ ಶಿಕ್ಷಕರ ವೃಂದ ನಿಯಮಗಳಂತೆ ನೇರ ನೇಮಕಾತಿಯ ಜೊತೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಬಡ್ತಿಗೆ ನಿಗದಿ ಇರುವ ಅನುಪಾತದಂತೆ ಬಡ್ತಿ ಮುಖಾಂತರದಲ್ಲಿಯೂ ಪ್ರೌಢಶಾಲಾ ಶಿಕ್ಷಕ ಹುದ್ದೆಗಳನ್ನು ತುಂಬಲು ಅವಕಾಶವಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಎಂದರೆ ಏಕ ರೂಪದಲ್ಲಿ ಇದ್ದು 1 ರಿಂದ 7 ನೇ ತರಗತಿ ಶಿಕ್ಷಕ ವೃಂದವಾಗಿತ್ತು. ರಾಷ್ಟ್ರ ವ್ಯಾಪಿ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ಹುದ್ದೆಗೆ ಇರಬೇಕಾದ ವಿದ್ಯಾರ್ಹತೆಯನ್ನು ಶಾಸನಬದ್ಧ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು ( ಎನ್.ಸಿ.ಟಿ.ಇ) ನಿಯಮಿಸುವ ಅಧಿಕಾರವನ್ನು ಹೊಂದಿದ್ದು, ನಿಯಮಗಳಂತೆ ಮತ್ತು ಶೈಕ್ಷಣಿಕ ಗುಣಮಟ್ಟದ ಹಿತದೃಷ್ಟಿಯಿಂದ 6ರಿಂದ 8ನೇ ತರಗತಿಗಳಿಗೆ ಪ್ರತ್ಯೇಕವಾದ ಪದವಿ ವಿದ್ಯಾರ್ಹತೆಯುಳ್ಳ ಶಿಕ್ಷಕ ವೃಂದವನ್ನು ಹೊಂದಬೇಕಾಗಿರುತ್ತದೆ ಎಂದು ಹೇಳಿದ್ದಾರೆ.
2017ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ನಿಯಮಗಳನ್ನು ಪರಿಷ್ಕರಿಸಿ ಪ್ರಾಥಮಿಕ ಶಿಕ್ಷಕ 1 ರಿಂದ 7ನೇ ತರಗತಿಯ ಒಟ್ಟಾರೆ 1,88,000 ವೃಂದ ಬಲದಲ್ಲಿಯೇ ಕಡಿತಗೊಳಿಸಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಗತ್ಯವಿರುವಂತೆ ಒಟ್ಟಾರೆ 52,000 ಬಲದ 6 ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದವನ್ನು ಅಸ್ತಿತ್ವಕ್ಕೆ ತರಲಾಗಿದೆ. ಆದರೆ ಮೂಲ ವೃಂದದಲ್ಲಿಯೂ ಪದವೀಧರ ವಿದ್ಯಾರ್ಹತೆಯುಳ್ಳ ಶಿಕ್ಷಕರು ಇದ್ದು 6 ರಿಂದ 8ನೇ ತರಗತಿ ವೃಂದಕ್ಕೆ ಪರೀಕ್ಷೆ ಮುಖಾಂತರದಲ್ಲಿ ಸೇರ್ಪಡೆಗೊಳ್ಳಲು ಸದರಿ ನಿಯಮಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದಿದ್ದಾರೆ.