ಕೊರೊನಾ ವಿರುದ್ಧ ಹೋರಾಡಲು 750 ಹಾಸಿಗೆ ವ್ಯವಸ್ಥೆ: ಡಾ. ಎಂ ಆರ್ ರವಿ
ಚಾಮರಾಜನಗರ :ಮಹಾಮಾರಿ ವಿರುದ್ಧ ಹೋರಾಡಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಜನರು ಎಚ್ಚರಿಕೆಯಿಂದರಬೇಕೆ ಹೊರತು, ಆತಂಕಪಡುವ ಅಗತ್ಯವಿಲ್ಲ ಎಂದು ಡಿಸಿ ಡಾ.ಎಂ ಆರ್ ರವಿ ಹೇಳಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಹಾಸಿಗೆ ಕೊರತೆ ಆಗುವ ಪ್ರಮೇಯವೇ ಉದ್ಭವಿಸಿಲ್ಲ. ರೋಗಿಗಳ ಸಂಖ್ಯೆ ಗಮನಿಸಿ ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ಆರಂಭಿಸಲಾಗುವುದು. ಸಂತೇಮರಹಳ್ಳಿಯಲ್ಲಿ ಕೋವಿಡ್ ಆಸ್ಪತ್ರೆಗೆ ಸಿದ್ಧತೆ ನಡೆಯುತ್ತಿದ್ದು, 750 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡುವಷ್ಟು ಸನ್ನದ್ಧವಾಗಿದ್ದೇವೆ ಎಂದರು.
ಆದರೆ, ಅಷ್ಟು ಸಂಖ್ಯೆ ಸೋಂಕಿತರು ನಮ್ಮ ಜಿಲ್ಲೆಯಲ್ಲಿ ಬರಲಾರರು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಂದು ವೇಳೆ ಕೊರೊನಾ ಸೋಂಕಿತರು ಮೃತಪಟ್ಟರೇ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಲು ತಂಡವೊಂದನ್ನು ರಚಿಸಲಾಗಿದೆ. ಶವ ಸಾಗಿಸಲು ಪ್ರತ್ಯೇಕ ಆ್ಯಂಬುಲೆನ್ಸ್ ಕೂಡ ಮೀಸಲಿಡಲಾಗಿದೆ ಎಂದರು.
ಖಾಲಿ ಇದೆ ನರ್ಸ್ ಹುದ್ದೆ :ಕೊರೊನಾ ಸೋಂಕಿತರ ಚಿಕಿತ್ಸೆ ಹಾಗೂ ಆರೈಕೆಗಾಗಿ ನರ್ಸ್ಗಳ ಅಗತ್ಯವಿದ್ದು, 40 ಹುದ್ದೆ ಖಾಲಿ ಇವೆ. ವೈದ್ಯಕೀಯ ಸಿಬ್ಬಂದಿ ಧೃತಿಗೆಡದೇ ಅನಗತ್ಯ ಭಯಬಿಟ್ಟು ಸೇವೆ ಮಾಡುವ ಸದಾವಕಾಶ ಎಂದುಕೊಂಡು ಆಸಕ್ತರು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬೇಕು. ನೇರ ಸಂದರ್ಶನವಿರಲಿದ್ದು, 6 ತಿಂಗಳ ಗುತ್ತಿಗೆ ಆಧಾರಿತ ನೌಕರಿ ಇದಾಗಿರಲಿದೆ. ಯುವ ಜನರು ಈ ಅವಕಾಶ ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.