ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ಅರಣ್ಯ ಪ್ರದೇಶವನ್ನು ಹೊಂದಿರುವ ಜೊತೆಗೆ ಪುರಾತನ ದೇಗುಲ, ಪ್ರಸಿದ್ಧ ಯಾತ್ರಾಸ್ಥಳಗಳಿರುವ ಜಿಲ್ಲೆ. 2023ರಲ್ಲಿ ಜಿಲ್ಲೆಗೆ 70 ಲಕ್ಷಕ್ಕೂ ಅಧಿಕ ಮಂದಿ ಭೇಟಿ ಕೊಟ್ಟಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ.
ಚಾಮರಾಜನಗರ ಪ್ರವಾಸೋದ್ಯಮ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 22 ಪ್ರವಾಸಿ ಸ್ಥಳಗಳಿಗೆ 70 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. ಅತಿ ಹೆಚ್ಚು ಜನರು ಭೇಟಿ ಕೊಟ್ಟ ಸ್ಥಳಗಳ ಪೈಕಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಮೊದಲ ಸ್ಥಾನದಲ್ಲಿದೆ.
ನಾಡಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕೆ 40 ಲಕ್ಷಕ್ಕೂ ಅಧಿಕ ಮಂದಿ ಬಂದಿದ್ದರೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ 1 ವರ್ಷದಲ್ಲಿ 2.5 ಲಕ್ಷ ಮಂದಿ ಆಗಮಿಸಿದ್ದು, ಹಿಮಾಚ್ಛಾದಿತ ಗಿರಿಧಾಮದ ಚೆಲುವು ವೀಕ್ಷಿಸಿದ್ದಾರೆ.
ಪ್ರಸಿದ್ಧ ಪ್ರವಾಸಿ ಸ್ಥಳಗಳು:ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯಲ್ಲಿ 22 ಪ್ರವಾಸಿ ಸ್ಥಳಗಳನ್ನು ಗುರುತಿಸಿದ್ದು ಪ್ರವಾಸಿಗರು ಭೇಟಿ ನೀಡಿದ ಅಂದಾಜು ಸಂಖ್ಯೆಯನ್ನು ಪ್ರತಿ ತಿಂಗಳು ಲೆಕ್ಕ ಹಾಕುತ್ತದೆ. ಚಾಮರಾಜನಗರದ ಚಿಕ್ಕಹೊಳೆ, ಸುವರ್ಣಾವತಿ, ಕರಿವರದರಾಜಬೆಟ್ಟ, ನರಸಮಂಗಲ, ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ತೆರಕಣಾಂಬಿ ದೇವಾಲಯ, ಹುಲಗನಮುರುಡಿ, ಕೊಳ್ಳೇಗಾಲದ ಮರಡಿಗುಡ್ಡ, ತ್ರಯಂಬಕಪುರ, ಬಿಳಿಗಿರಿರಂಗನ ಬೆಟ್ಟ, ಬಳೆಮಂಟಪ, ಹೊಗೆನಕಲ್ ಜಲಪಾತ, ಭರಚುಕ್ಕಿ, ವೆಸ್ಲಿ ಸೇತುವೆ, ಮಲೆ ಮಹದೇಶ್ವರ ಬೆಟ್ಟ, ಪಾಲಾರ್ ಗಡಿ, ಒಡೆತರಪಾಳ್ಯ ಟಿಬೆಟಿಯನ್ ಕ್ಯಾಂಪ್, ಒನ್ನಮೇಟಿ-ಅತ್ತಿಖಾನೆಗಳುಗಳಿಗೆ ಕಳೆದ ವರ್ಷ ಒಟ್ಟಾರೆ 70 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ.
ವಿದೇಶಿ ಪ್ರವಾಸಿಗರ ಭೇಟಿ:ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಕೆ.ಗುಡಿ, ಬಿಳಿಗಿರಿರಂಗನ ಬೆಟ್ಟಕ್ಕೆ ನೂರಾರು ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿ ಗಡಿಜಿಲ್ಲೆ ಪ್ರಕೃತಿ ಚೆಲುವನ್ನು ಕಣ್ತುಂಬಿಕೊಂಡಿದ್ದಾರೆ.
ಶಕ್ತಿ ಯೋಜನೆಯ ಎಫೆಕ್ಟ್:ಸರ್ಕಾರವು ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಜಾರಿಗೊಳಿಸಿದ ಬಳಿಕ ಗಡಿಜಿಲ್ಲೆಯ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಜನವರಿಯಿಂದ ಆಗಸ್ಟ್‌ತನಕ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ 30-35 ಸಾವಿರ ಪ್ರವಾಸಿಗರು ಭೇಟಿ ಕೊಟ್ಟಿದ್ದರೆ ಆಗಸ್ಟ್ ಬಳಿಕ ಇದರ ಸಂಖ್ಯೆ ದ್ವಿಗುಣಗೊಂಡಿದೆ. ನವೆಂಬರ್ನಲ್ಲಿ 80 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಮಲೆಮಹದೇಶ್ವರ ಬೆಟ್ಟಕ್ಕೂ ಕೂಡ 4-5 ಲಕ್ಷದಷ್ಟಿದ್ದ ಭಕ್ತರ ಸಂಖ್ಯೆ ಆಗಸ್ಟ್ ಬಳಿಕ 6-7 ಲಕ್ಷ ದಾಟಿದ್ದು ಭರಚುಕ್ಕಿ, ಬಿಳಿಗಿರಿರಂಗನ ಬೆಟ್ಟ, ಹೊಗೆನಕಲ್ ಜಲಪಾತಕ್ಕೆ ಆಗಮಿಸಿದವ ಸಂಖ್ಯೆ ಕಳೆದ 4 ತಿಂಗಳಲ್ಲಿ ಡಬಲ್ ಆಗಿದೆ.
ಇದನ್ನೂ ಓದಿ:ಮೇಲ್ಸೇತುವೆಗಳಲ್ಲಿ ಸಂಚಾರ ನಿರ್ಬಂಧ: ಅಪಘಾತಮುಕ್ತ ಹೊಸ ವರ್ಷಾಚರಣೆಗೆ ಕರೆ ನೀಡಿದ ಬೆಂಗಳೂರು ಸಂಚಾರಿ ಪೊಲೀಸರು