ಚಾಮರಾಜನಗರ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೊಳ್ಳೇಗಾಲ ಮತ್ತು ಹನೂರು ಭಾಗದಲ್ಲಿ ಅಂದಾಜು 6,450 ಎಕರೆ ಬೆಳೆ ಹಾನಿ (Crop damage) ಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ತಿಳಿಸಿದ್ದಾರೆ.
'ಈಟಿವಿ ಭಾರತ' ಪ್ರಕಟಿಸಿದ್ದ ಸುದ್ದಿ ಗಮನಿಸಿ ಕೃಷಿ ಭೂಮಿಗೆ ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿ ಅಂದಾಜಿಸಿದ್ದು, ರಾಗಿ ಬೆಳೆ (Millet crop) ಅಷ್ಟೇ ಅಲ್ಲದೆ ಸಾಮೆ, ಅವರೆ, ನೆಲಗಡಲೆ, ಮೆಕ್ಕೆಜೋಳ, ನವಣೆ ಬೆಳೆ ಸಹ ನಾಶವಾಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ರಾಗಿ ಬೆಳೆ ಹಾನಿಯಾಗಿದೆ ಎಂದು ಅವರು ತಿಳಿಸಿದರು.
ಬೆಳೆ ಹಾನಿ ಕುರಿತು ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ (Male Mahadeshwara Hills) ತಪ್ಪಲಿನ ಬಹುತೇಕ ರೈತರು ನಿರಂತರ ಮಳೆಗೆ ಕೈ ಸುಟ್ಟುಕೊಂಡಿದ್ದು, 5 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ರಾಗಿ ಬೆಳೆ ನಾಶವಾಗಿದೆ. ಸಾಮೆ - 150 ಎಕರೆ, ನವಣೆ -100 ಎಕರೆ, ಮೆಕ್ಕೆಜೋಳ - 500 ಎಕರೆ ಹಾಗೂ ನೆಲಗಡಲೆ - 200 ಎಕರೆಯಷ್ಟು ಹಾನಿಗೊಂಡಿದ್ದು, ಜಿಲ್ಲೆಯ ವಿವಿಧೆಡೆ ಬೆಳೆಹಾನಿ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಬೇಕಿದೆ ಎಂದರು.
ಇನ್ನು ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಾಗಿ ಬೆಳೆಗಾರರು ಕಂಗಲಾಗಿದ್ದು, ಕಟಾವಿಗೆ ಬಂದ ಫಸಲಿನಲ್ಲಿ ಮೊಳಕೆ ಬಂದಿದೆ. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಅನ್ನದಾತರು ಚಿಂತಾಜನಕರಾಗಿದ್ದಾರೆ.