ಚಾಮರಾಜನಗರ: ಬೆಳಕಿನ ಹಬ್ಬ ದೀಪಾವಳಿ ಆಚರಿಸಲು ಇಡೀ ದೇಶಾದ್ಯಂತ ಜನರು ಕಾತರದಿಂದ ಕಾಯುತ್ತಿದ್ದರೆ, ಈ 6 ಊರುಗಳು ಮಾತ್ರ ಹಬ್ಬ ಆಚರಣೆಯನ್ನು ಒಂದು ವಾರ ಮುಂದಕ್ಕೆ ಹಾಕಿವೆ. ಹೌದು, ಅಚ್ಚರಿಯಾದರೂ ಸತ್ಯ. ದೀಪಾವಳಿ ಬಂತೆಂದರೆ ಸಡಗರ - ಸಂಭ್ರಮ, ಚಿಣ್ಣರಿಗೆ ಪಟಾಕಿ ಹಚ್ಚುವ ಖುಷಿ, ಹಿರಿಯರಿಗೆ ದೀಪ ಬೆಳುಗುವ ಸಂತಸ. ಆದರೆ, ಮಂಗಳವಾರ ದೇಶಾದ್ಯಂತ ಆಚರಿಸುವ ಸಂಭ್ರಮದ ಬೆಳಕಿನ ಹಬ್ಬವನ್ನು ಗುಂಡ್ಲುಪೇಟೆ ತಾಲೂಕಿನ 6 ಊರುಗಳು ಹಬ್ಬದ ನಂತರದ ವಾರದಲ್ಲಿ ಬುಧವಾರದಂದು ಆಚರಿಸಲು ನಿರ್ಧರಿಸಿವೆ.
ಗುಂಡ್ಲುಪೇಟೆ ತಾಲೂಕಿನ 6 ಗ್ರಾಮಗಳಲ್ಲಿ ಹಬ್ಬದ ಸಂತಸವೇ ಇಲ್ಲ. ಕಾರಣ ಈ ಬಾರಿ ಹಬ್ಬ ಮಂಗಳವಾರ ಬಂದಿರುವುದು. ಗುಂಡ್ಲುಪೇಟೆ ತಾಲೂಕಿನ ವೀರನಪುರ, ಬನ್ನಿತಾಳಪುರ, ಇಂಗಲವಾಡಿ, ಮಾಡ್ರಹಳ್ಳಿ, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳಲ್ಲಿ ದೀಪಾವಳಿಯ ಬಲಿ ಪಾಡ್ಯಮಿ ಬುಧವಾರ ಬಂದರೆ ಮಾತ್ರ ಹಬ್ಬ ಆಚರಿಸಲಿದ್ದು, ಇಲ್ಲದಿದ್ದರೆ ಮುಂದಿನ ಬುಧವಾರವೇ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ.
ದೀಪಾವಳಿ ಹಬ್ಬದ ಸಂಭ್ರಮ, ಹೊಸ ಬಟ್ಟೆ ತೊಡುವುದು, ಪಟಾಕಿ ಸಿಡಿಸುವುದು, ಮನೆಯಲ್ಲಿ ಸಿಹಿ ಊಟ ಎಲ್ಲವೂ ಬುಧವಾರವೇ ನಡೆಯಲಿದ್ದು, ಕಳೆದ ಮೂರು ತಲೆಮಾರುಗಳಿಂದ ಈ ಆರು ಗ್ರಾಮದವರು ಬುಧವಾರವೇ ಹಬ್ಬ ಆಚರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ.
ಬುಧವಾರವೇ ಹಬ್ಬ ಏಕೆ..?:ಅಷ್ಟಕ್ಕೂ ಬುಧವಾರವೇ ಏಕೆ ಈ ಆರು ಗ್ರಾಮಗಳು ದೀಪಾವಳಿ ಮಾಡಲಿವೆ ಎಂಬ ಕುತೂಹಲಕ್ಕೆ ಉತ್ತರ, ಗ್ರಾಮಸ್ಥರಲ್ಲಿ ಮನೆ ಮಾಡಿರುವ ಆತಂಕ. ಬುಧವಾರ ಹೊರತುಪಡಿಸಿ ಹಬ್ಬ ಆಚರಿಸಿದರೆ ಏನಾದರೂ ಕೆಡುಕಾಗಬಹುದು, ದನಗಳಿಗೆ ಏನಾದರೂ ತೊಂದರೆ ಆಗಬಹುದು ಎಂಬ ಆತಂಕದಿಂದ ಈ ನಿರ್ಧಾರಕ್ಕೆ ಬಂದಿದ್ದಾರಂತೆ ಗ್ರಾಮಸ್ಥರು.