ಚಾಮರಾಜನಗರ: ಇಬ್ಬರನ್ನು ಬಲಿಪಡೆದ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತೀವ್ರ ಕಸರತ್ತು ನಡೆಸಿದ್ದು, ಎರಡನೇ ದಿನವೂ ಆಪರೇಷನ್ ಟೈಗರ್ ಮುಂದುವರೆದಿದೆ.
ಕೆಬ್ಬೇಪುರ ಎಲ್ಲೆ, ಹುಂಡಿಪುರ, ಚೌಡಹಳ್ಳಿ ಭಾಗದಲ್ಲಿ ವ್ಯಾಘ್ರನ ಚಲನವಲನ ಗುರುತಿಸುವ ನಿಟ್ಟಿನಲ್ಲಿ, ಈಗಾಗಲೇ 200 ಕ್ಯಾಮರಾಗಳನ್ನು ಅಳವಡಿಸಿದ್ದು, ಡ್ರೋನ್ ಕ್ಯಾಮರಾ ಕೂಡ ಬಳಸಲಾಗಿದೆ.
ಆಪರೇಷನ್ ನರಭಕ್ಷಕಕ್ಕೆ 6 ಆನೆ, 200 ಕ್ಯಾಮರಾ ಬಳಕೆ: ವದಂತಿಗಳಿಂದ ಆತಂಕ ಕಾರ್ಯಾಚರಣೆಗೆ ಗಣೇಶ, ಪಾರ್ಥಸಾರಥಿ, ರೋಹಿತ್ ಆನೆಗಳೊಂದಿಗೆ, ದಸರಾಗೆ ತೆರಳಿದ್ದ ಜಯಪ್ರಕಾಶ್, ಅಭಿಮನ್ಯು ಹಾಗೂ ಗೋಪಾಲಸ್ವಾಮಿ ಆನೆಗಳು ಕೂಡಾ ಇಂದು ಕಾರ್ಯಾಚರಣೆಗಿಳಿದಿವೆ. 8 ಮಂದಿಯಂತೆ ಆರು ತಂಡಗಳು ರಚನೆಯಾಗಿದ್ದು, ಚೌಡಹಳ್ಳಿ, ಹುಂಡಿಪುರ, ಶಿವಪುರ ಹಾಗೂ ಕಲಿಗೌಡನಹಳ್ಳಿ ಭಾಗದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ವದಂತಿಗಳಿಂದ ಆತಂಕ: ಬೆಳವಾಡಿ, ಶಿವಪುರ, ಹುಲ್ಲೇಪುರ ಗ್ರಾಮಗಳಲ್ಲಿ ಹುಲಿ ಇದೆ ಎಂದು, ಅಷ್ಟೇ ಅಲ್ಲದೇ ಮಗುವಿನಹಳ್ಳಿಯಲ್ಲಿ ಮತ್ತೋರ್ವನ ಮೇಲೆ ದಾಳಿ ಮಾಡಿದೆ ಎಂಬಂತಹ ಗಾಳಿ ಮಾತುಗಳಿಂದ ಬುಧವಾರ ಸಂಜೆ ಈ ಗ್ರಾಮಗಳ ಜನರು ಮನೆಯಿಂದ ಹೊರಬರದೇ ಭಯದಲ್ಲೇ ಕಾಲ ಕಳೆದಿದ್ದಾರೆಂಬ ಮಾಹಿತಿ ಸಿಕ್ಕಿದೆ.