ಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೆಚ್. ಮೂಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರನ್ನು ಮಹಾದೇವಸ್ವಾಮಿ (55), ಪತ್ನಿ ಮಂಗಳಮ್ಮ (40), ಮಕ್ಕಳಾದ ಗೀತಾ (15) ಹಾಗೂ ಶೃತಿ (11) ಎಂದು ಗುರುತಿಸಲಾಗಿದೆ. ಅದರೆ ಕುಟುಂಬಸ್ಥರ ಆತ್ಮಹತ್ಯೆ ನಿರ್ಧಾರ ನಿಗೂಢವಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.
ಇತ್ತ ಕುಟುಂಬದ ಮಹಾದೇವಸ್ವಾಮಿ ಅವರಿಗೆ ಕಳೆದ ತಿಂಗಳ 9ರಂದು ಕೊರೊನಾ ದೃಢವಾಗಿತ್ತು, ಬಳಿಕ ಗುಣಮುಖರಾಗಿದ್ದರು. ಇವರ ಪತ್ನಿಗಾಗಲಿ, ಮಕ್ಕಳಿಗಾಗಲಿ ಕೊರೊನಾ ಟೆಸ್ಟ್ ನಡೆಸಿರಲಿಲ್ಲ, ಜ್ವರ-ಶೀತದಿಂದಲೂ ಬಳಲುತ್ತಿರಲಿಲ್ಲ ಎಂದು ಆಶಾ ಕಾರ್ಯಕರ್ತೆಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾತ್ರಿ ಊಟ ಮಾಡಿ ಅಕ್ಕಪಕ್ಕದ ಮನೆಯವರ ಜೊತೆ ಮಹಾದೇವಸ್ವಾಮಿ ಮಾತನಾಡಿದ್ದಾರೆ. ಕೆಲವರ ಬಳಿ ಕೈಸಾಲ ಪಡೆದಿದ್ದನ್ನು ಮಂಗಳವಾರ ಬೆಳಗ್ಗೆಯೇ ಹಿಂತಿರುಗಿಸಿದ್ದಾರೆ. ಇವರ ಓರ್ವ ಮಗಳನ್ನು ನಂಜನಗೂಡಿಗೆ ವಿವಾಹ ಮಾಡಿ ಕೊಟ್ಟಿದ್ದು, ಆಕೆಗೆ ಕರೆ ಮಾಡಿ ಸಾಮಾನ್ಯವಾಗಿಯೇ ಮಾತನಾಡಿದ್ದಾರೆ. ಸ್ನೇಹಿತರೊಬ್ಬರ ಬಳಿ ಲಾಕ್ಡೌನ್ ನಡುವೆ ಕೊರೊನಾ ಬಂದಿದ್ದು ಬಳಿಕ ಕೂಲಿ ಸಿಗದಿರುವುದರಿಂದ ಬದುಕಲೇ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು ಎಂದು ತಿಳಿದುಬಂದಿದೆ.