ಕೊಳ್ಳೇಗಾಲ: ಹುಲಿಗಳು ಭಾರತದ ಹೆಮ್ಮೆಯ ಪ್ರತೀಕ. ರಾಷ್ಟ್ರ ಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಲಿ ಹಲವು ವರ್ಷಗಳ ಹಿಂದೆ ಅಪಾಯದಂಚಿನ ಹಂತದಲ್ಲಿತ್ತು. ಈ ಹುಲಿಗಳ ಸಂರಕ್ಷಣೆಗೆ ಭಾರತದಲ್ಲಿ ತೆಗೆದುಕೊಂಡ ಸೂಕ್ತ ಕ್ರಮಗಳ ಪರಿಣಾಮ ಅವುಗಳ ಸಂಖ್ಯೆ ಸುಧಾರಿಸಿದ್ದು, ಇಂದು ವಿಶ್ವದ ಶೇ. 75ಕ್ಕಿಂತ ಅಧಿಕ ಹುಲಿಗಳನ್ನು ನಾವು ಭಾರತದಲ್ಲಿ ಕಾಣಬಹುದಾಗಿದೆ.
ಹುಲಿಯ ದೇಹ ಕಂದು ಮಿಶ್ರಿತ ಹಳದಿ ಬಣ್ಣದಿಂದ ಕೂಡಿದ್ದು, ಪ್ರತಿಯೊಂದು ಹುಲಿಗಳು ವಿಭಿನ್ನ ಶೈಲಿಯ ಕಪ್ಪು ಪಟ್ಟಿಗಳನ್ನು ಹೊಂದಿರುತ್ತವೆ. ಇಂದಿಗೂ ಸಹ ಆ ಪಟ್ಟಿಗಳ ಆಧಾರದ ಮೇಲೆ ಪ್ರತೀ ನಾಲ್ಕು ವರ್ಷಕ್ಕೂಮ್ಮೆ ಹುಲಿ ಗಣತಿ ಮಾಡಲಾಗುತ್ತಿದೆ. ಗತ್ತು, ಗಾಂಭೀರ್ಯಕ್ಕೆ ಹೆಸರಾದ ಪ್ರಾಣಿ ಹುಲಿಯಾಗಿದ್ದು, ಅದಕ್ಕೇ ಬಹುಶಃ ಎಲ್ಲರಿಗೂ ಇಷ್ಟವಾಗುವ ಪ್ರಾಣಿಯಾಗಿದೆ.
ಹೌದು, ಕರ್ನಾಟಕದಲ್ಲಿ ಸದ್ಯ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ, ಭಧ್ರ , ದಾಂಡೇಲಿಯಂತಹ ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಮುಂದಿನ ದಿನಗಳಲ್ಲಿ ಮಲೆ ಮಹದೇಶ್ವರ ವನ್ಯಜೀವಿ ಧಾಮವೂ ಹುಲಿ ಸಂರಕ್ಷಿತ ಪ್ರದೇಶವಾಗುತ್ತದೆ. ಪ್ರಸ್ತುತ ಚಾಮರಾಜನಗರ ಜಿಲ್ಲೆಯಲ್ಲೇ 3 ಹುಲಿ ಸಂರಕ್ಷಿತ ಪ್ರದೇಶಗಳಿರುವುದು ಹೆಮ್ಮೆಯ ವಿಚಾರವಾದರೆ, ಇದೀಗ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲೂ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದನ್ನು ಹುಲಿ ಸಂರಕ್ಷಣಾ ಪ್ರದೇಶ ಮಾಡಲು ನಿರ್ಧರಿಸಿವೆ. ಆದರೆ ಕೊರೊನಾದಿಂದ ಸದ್ಯ ಈ ಕಾರ್ಯಕ್ಕೆ ತಡೆಯಾಗಿದೆ.
ಈ ಬಗ್ಗೆ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಆರ್ಎಫ್ಒ ಏಳು ಕುಂಡಲು ಈಟಿವಿ ಭಾರತದೊಂದಿಗೆ ಮಾತನಾಡಿ, ಮಲೆ ಮಹದೇಶ್ವರ ವನ್ಯಜೀವಿ ಧಾಮವು 627 ಚ.ಕಿಲೋ ಮೀಟರ್ ವ್ಯಾಪಿಯಿಂದ ಕೂಡಿದೆ. ಪಾಲರ್, ರಾಮಪುರ, ಮಹದೇಶ್ವರ ಬೆಟ್ಟ, ಹೂಗ್ಯಂ, ಹನೂರು, ಪಿ.ಜಿ.ಪಾಳ್ಯ ಅರಣ್ಯ ಪ್ರದೇಶದ ವಲಯಗಳಾಗಿವೆ. ಅರಣ್ಯದಲ್ಲಿ ಸುರಕ್ಷತೆ ಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿದಂತೆ ಪ್ರಾಣಿಗಳು ಜೀವಿಸಲು ಅನುಕೂಲವಾಗುತ್ತಿದೆ. ಕಾಡೆಮ್ಮೆ, ಜಿಂಕೆ, ಸಂಬಾರ್ಗಳ ಸಂಖ್ಯೆ ಹೆಚ್ಚಿರುವುದರಿಂದ ಹುಲಿಯ ಸಂತತಿ ಹೆಚ್ಚಾಗುತ್ತಿದೆ. ಪ್ರಾಣಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಇದ್ದರೆ ಬೇರೆ ಕಡೆ ಹೋಗುವುದನ್ನು ನಿಂತ್ರಿಸಬಹುದು. ಆ್ಯಂಟಿ ಪೌಚಿಂಗ್ ಕ್ಯಾಂಪ್ ಮಾಡಿರುವುದರಿಂದ ಕಾಡು ಪ್ರಾಣಿಗಳ ಬೇಟೆಗೆ ಅವಕಾಶವಿರುವುದಿಲ್ಲ.
ಈ ಹಿಂದೆ ಇಲ್ಲಿ ಬರೀ 6-7 ಹುಲಿಗಳು ಮಾತ್ರ ಇದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಹುಲಿಯ ಸಂತತಿ 20ಕ್ಕೂ ಅಧಿಕವಾಗಿದೆ. ಸದ್ಯ ಒಟ್ಟು 27 ಹುಲಿಗಳು ವಾಸವಾಗಿವೆ. ಮರಿಗಳನ್ನು ಸಹ ಕಾಣಬಹುದಾಗಿದೆ. ಕೊರೊನಾ ಬಾರದಿದ್ದರೆ ಮಲೆ ಮಹದೇಶ್ವರ ವನ್ಯಜೀವಿ ಧಾಮವು ಹುಲಿ ಸಂರಕ್ಷಿತ ಪ್ರದೇಶವಾಗುತ್ತಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಬಂದಿದೆ. ಮುಂದಿನ ದಿನಗಳಲ್ಲಿ ಈ ಕೆಲಸವಾಗುತ್ತದೆ. ಇನ್ನೂ 7-8 ವರ್ಷಗಳಲ್ಲಿ ಬಂಡೀಪುರ, ನಾಗರಹೊಳೆಯಂತೆ ಮಲೆ ಮಹದೇಶ್ವರ ವನ್ಯಜೀವಿ ಧಾಮ ಕೂಡ ಹುಲಿ ಸಂರಕ್ಷಿತ ಅಭಯಾರಣ್ಯವಾಗಿ ಹೊರ ಹೊಮ್ಮುತ್ತದೆ ಎಂದು ತಿಳಿಸಿದರು.