ಚಾಮರಾಜನಗರ :ಎರಡು ರಾಜ್ಯಗಳ ಗಡಿ ಹಂಚಿಕೊಂಡಿರುವ ಚಾಮರಾಜನಗರದಲ್ಲಿ 2021ರಲ್ಲಿ ನಡೆದ ಭಾರೀ ಕಹಿ ಘಟನೆ ಎಂದರೆ ಅದು ಕೊರೊನಾ ರೋಗಿಗಳಿಗೆ ಆಮ್ಲಜನಕ ಪೂರೈಕೆಯಲ್ಲಾದ ಅವಘಡ. ಇದಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆ ಸೇರಿದಂತೆ ಹಲವಾರು ಘಟನೆಗಳು ಜಿಲ್ಲೆಯ ಜನರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ. ಈ ವರ್ಷ(2021) ಜಿಲ್ಲೆಯಲ್ಲಿ ಏನೆಲ್ಲಾ ನಡೆಯಿತು ಎಂಬುದರ ಪಕ್ಷಿನೋಟ ಇಲ್ಲಿದೆ.
ಕೊರೊನಾ ಸ್ಫೋಟ, ಆಮ್ಲಜನಕ ದುರಂತ
ಕೊರೊನಾ ಮೊದಲನೇ ಅಲೆಯಲ್ಲಿ ತಿಂಗಳುಗಟ್ಟಲೇ ಜಿಲ್ಲೆ ಹಸಿರು ವಲಯದಲ್ಲಿ ಕಾಣಿಸಿಕೊಂಡು ಇಡೀ ದೇಶದ ಗಮನ ಸೆಳೆದಿತ್ತು. ಆದರೆ, 2ನೇ ಅಲೆಯ ವೇಳೆ ಜಿಲ್ಲೆಯಲ್ಲಿ ಕೊರೊನಾ ಸ್ಫೋಟಗೊಂಡು ದಿನವೊಂದಕ್ಕೆ ಗರಿಷ್ಠ 450 ಜನರು ಸೋಂಕಿಗೆ ಒಳಗಾಗಿ ಕರಾಳ ಛಾಯೆ ತೆರೆದಿಟ್ಟಿತ್ತು.
ಮೇ ತಿಂಗಳಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯ ಕೋವಿಡ್ ರೋಗಿಗಳಿಗೆ ಸಮರ್ಪಕ ಆಮ್ಲಜನಕ ಪೂರೈಕೆಯಾಗದೇ 24 ಮಂದಿ ಅಸುನೀಗಿದ್ದರು. ಇದು ಇಡೀ ದೇಶದಲ್ಲೇ ಕಪ್ಪುಚುಕ್ಕೆಯಾಗಿದೆ. ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ, ಸರ್ಕಾರ ಎಡವಿದ್ದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಇಬ್ಬರು ಡಿಸಿಗಳ ಬಹಿರಂಗ ಕೆಸರೆರಚಾಟಕ್ಕೆ ಈ ದುರಂತ ಸಾಕ್ಷಿಯಾಯಿತು.
ಆಸ್ಪತ್ರೆ ಉದ್ಘಾಟನೆ, ಜಾನಪದ ಅಕಾಡೆಮಿ ಪ್ರಶಸ್ತಿ, ಹಕ್ಕಿಹಬ್ಬ
450 ಹಾಸಿಗೆ ಸಾಮರ್ಥ್ಯದ ನೂತನ ಜಿಲ್ಲಾಸ್ಪತ್ರೆಯನ್ನು ರಾಷ್ಟಪತಿ ರಾಮನಾಥ್ ಕೋವಿಂದ್ ಉದ್ಘಾಟನೆ ಮಾಡುವ ಮೂಲಕ ಇದು ಜನರ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವಾಯಿತು. ಇದರೊಟ್ಟಿಗೆ, ನಗರದಲ್ಲಿ ನಡೆದ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಲ್ಲಿನ ಸೋಬಾನೆ ಕಲಾವಿದೆ ಹೊನ್ನಮ್ಮ ಅಕಾಡೆಮಿ ಪ್ರಶಸ್ತಿ ಪಡೆದಿರುವುದು ಜಿಲ್ಲೆಗೆ ದಕ್ಕಿದ ಶ್ರೇಯವಾಗಿದೆ.
7ನೇ ಆವೃತ್ತಿಯ ಕರ್ನಾಟಕ ಹಕ್ಕಿ ಹಬ್ಬ ಈ ಬಾರಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದು ನೂರಾರು ಪಕ್ಷಿಪ್ರೇಮಿಗಳು ಬರ್ಡ್ ಸಫಾರಿ ನಡೆಸಿದ್ದು ವಿಶೇಷವಾಗಿತ್ತು. ಜೊತೆಗೆ, 20 ವರ್ಷದ ಬಳಿಕ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪಕ್ಷಿ ಗಣತಿ ನಡೆದು 289 ಪ್ರಬೇಧಗಳನ್ನು ಪತ್ತೆ ಹಚ್ಚಲಾಯಿತು.
ಬಿಳಿಗಿರಿರಂಗನ ದರ್ಶನ, ಮಾದಪ್ಪನಿಗೆ ಬೆಳ್ಳಿ ಕಣ್ಣು ಕೊಟ್ಟ ಎಸ್ಎಂಕೆ
ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥನ ದೇವಾಲಯ ಜೀರ್ಣೋದ್ಧಾರ ನಡೆದು 4 ವರ್ಷಗಳ ಬಳಿಕ ಭಕ್ತರಿಗೆ ರಂಗಪ್ಪ ದರ್ಶನ ಕೊಟ್ಟ. ಸಂಪ್ರೋಕ್ಷಣಾ ಕಾರ್ಯಕ್ರಮದಲ್ಲಿ ಈ ಹಿಂದೆ ಬೆಟ್ಟದಲ್ಲಿ ಕಾರ್ಯನಿರ್ವಹಿಸಿದ್ದ ಮುಸ್ಲಿಂ ಅಧಿಕಾರಿ ಮುಜೀಬ್ ಪಾಲ್ಗೊಂಡು, ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.