ಚಾಮರಾಜನಗರ: ಇಡೀ ಜಗತ್ತೇ ಹೊಸ ವರ್ಷದ ನವ ಉಲ್ಲಾಸದಲ್ಲಿದೆ. 2019ನೇ ವರ್ಷಕ್ಕೆ ಗುಡ್ ಬಾಯ್ ಹೇಳಿ ನೂತನ ವರ್ಷವನ್ನು ಈಗಾಗಲೇ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಆದರೆ, ಕಳೆದ ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸಾಕಷ್ಟು ಅಪರಾಧ, ದುರ್ಘಟನೆಗಳು ಸಂಭವಿಸಿವೆ. ಕೆಲ ಘಟನೆಗಳಂತೂ ಮನಕಲಕುವಂತಿದ್ದವು.. ಆ ಎಲ್ಲದರ ಬಗ್ಗೆ ಒಂದು ಹಿನ್ನೋಟ.
2019ರಲ್ಲಿ ಚಾಮರಾಜನಗರವಷ್ಟೇ ಅಲ್ಲದೇ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಗುಂಡ್ಲುಪೇಟೆ ಹೊರವಲಯದಲ್ಲಿ ಇಡೀ ಕುಟುಂಬವನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಓಂಕಾರ್ ಪ್ರಸಾದ್ ಪ್ರಕರಣ. ತಂದೆ-ತಾಯಿ, ಗರ್ಭಿಣಿ ಪತ್ನಿ, ಮಗನನ್ನು ಕೊಂದು ತಾನೂ ಗುಂಡಿಕ್ಕಿಕೊಂಡ ಈ ಘಟನೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು.
ಮದುವೆ ಮುಗಿಸಿ ವಿಹಾರಕ್ಕೆಂದು ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರಕ್ಕೆ ಬಂದಿದ್ದ ಬೆಂಗಳೂರು ಮೂಲದ ಮನೋಜ್ ಕುಮಾರ್, ಲೋಕೇಶ್ ಹಾಗೂ ವೀಣಾ ಎಂಬ ಸ್ನೇಹಿತರು ನೀರುಪಾಲಾಗಿದ್ದು, ಡಾಕ್ಟರ್ ಆಗಬೇಕೆಂದುಕೊಂಡಿದ್ದ ಬೇಗೂರಿನ ಧನಂಜಯ ಎಂಬ ಬಾಲಕ ಬ್ರೈನ್ ಟ್ಯೂಮರ್ಗೆ ಬಲಿಯಾದದ್ದು, ಬೇಡರಪುರದ ಶ್ವೇತಾ ಎಂಬ ಮೂರು ವರ್ಷದ ಬಾಲಕಿ ನೀರೆಂದು ಭಾವಿಸಿ ಸೀಮೆ ಎಣ್ಣೆ ಕುಡಿದು ಅಸುನೀಗಿದ್ದು, ಹೊಳೆಯಲ್ಲಿ ಸ್ನಾನ ಮಾಡುವಾಗ ಹೆಬ್ಬಸೂರಿನ ತಾಯಿ-ಮಗಳು ಮೃತಪಟ್ಟ ದುರ್ಷಟನೆ, ಪಾರಿವಾಳ ಹಿಡಿಯುವಾಗ ದೇಗುಲದ ಗೋಪುರದಿಂದ ಬಿದ್ದು ಬಾಲಕನ ಪ್ರಾಣಪಕ್ಷಿ ಹಾರಿ ಹೋಗಿದ್ದು, ನೆಂಟರ ಮನೆಗೆ ಹೋಗುವ ಧಾವಂತದಲ್ಲಿ ರೈಲಿನ ಚಕ್ರಕ್ಕೆ ಸಿಲುಕಿ ಕಾಲು ತುಂಡಾದದ್ದು, ತಾಯಿಗೆ ಅನಾರೋಗ್ಯವೆಂದು ಸಾಲ ಪಡೆದ ಯುವಕನ ಆತ್ಮಹತ್ಯೆ, ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ರಸ್ತೆ ಅಪಘಾತದಲ್ಲಿ ಅಸುನೀಗಿದ ತಂದೆ- ತಾಯಿ ಮೃತದೇಹಗಳ ಮುಂದೆ ಕುಳಿತ ಕಂದಮ್ಮ ಹೀಗೆ ಹಲವಾರು ದುರಂತಗಳು 2019ರಲ್ಲಿ ನಡೆದು ಹೋಗಿದೆ.
ಈ ಮೇಲಿನವು ಮನಕಲಕುವ ಘಟನೆಗಳಾದರೆ ಇನ್ನೂ ಕೆಲ ನಾಚಿಕೆಗೇಡಿನ ಘಟನೆಗಳು ಜಿಲ್ಲೆಯಲ್ಲಿ ನಡೆದು ಹೋಗಿದೆ. ಜಿಲ್ಲೆಯ ಏಕಲವ್ಯ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ ವೇಳೆ ಪ್ರಾಂಶುಪಾಲನೇ ಲೈಂಗಿಕ ದೌರ್ಜನ್ಯ ಎಸಗಿದ್ದು, ವೃದ್ಧನೊಬ್ಬ ಪಕ್ಕದ ಮನೆಯ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದು, ಇಡ್ಲಿ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ, ನೆಂಟರ ಮನೆಗೆ ಮಾವಿನ ಹಣ್ಣನ್ನು ತಿನ್ನಲು ಹೋದ 15ರ ಬಾಲಕನೋರ್ವ ಅಪ್ರಾಪ್ತೆ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದು, ಗಾಂಜಾ ಮಾರುವಂತೆ ಮಗನನ್ನೇ ತಾಯಿ ಒತ್ತಾಯಿಸಿದ್ದು, ಕುಡಿಯಲು ಹಣ ನೀಡಲಿಲ್ಲವೆಂದು ಪತ್ನಿಯನ್ನೇ ಕೊಂದ ವರದಿಗಳು ಜನರಲ್ಲಿ ಆಕ್ರೋಶ ಮೂಡಿಸಿದ್ದವು.