ಚಾಮರಾಜನಗರ : ಪ್ರತ್ಯೇಕ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾಮರಾಜನಗರ ಮಕ್ಕಳ ಸ್ನೇಹಿ ಹಾಗೂ 1 ನೇ ಹೆಚ್ಚುವರಿ ನ್ಯಾಯಾಲಯವು ಇಬ್ಬರು ಅಪರಾಧಿಗಳಿಗೆ ತಲಾ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೆ, ಸಂತ್ರಸ್ತ ಅಪ್ರಾಪ್ತ ಬಾಲಕಿಯರಿಗೆ ತಲಾ 4 ಲಕ್ಷ ರೂ.ಗಳನ್ನು 30 ದಿನದ ಒಳಗೆ ಪರಿಹಾರವಾಗಿ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾ. ಎ.ಸಿ.ನಿಶಾರಾಣಿ ಆದೇಶ ನೀಡಿದ್ದಾರೆ.
ಪ್ರಕರಣ - 1 : 5 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕೊಳ್ಳೇಗಾಲ ತಾಲೂಕಿನ ಗ್ರಾಮವೊಂದರ ಬಸವರಾಜು (35) ಶಿಕ್ಷೆಗೊಳಗಾದ ಅಪರಾಧಿ. ಈತ 2019 ರ ಡಿ. 2 ರಂದು ಮನೆಯ ಮುಂಭಾಗ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ, ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಸವರಾಜನಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 20 ಸಾವಿರ ರೂ. ಗಳ ದಂಡ ವಿಧಿಸಲಾಗಿದೆ.
ಇದನ್ನೂ ಓದಿ :ಅತ್ಯಾಚಾರ ಆರೋಪಿ ಬಿಡುಗಡೆಗೆ ನಕಲಿ ಜಾಮೀನು ಆದೇಶ ನೀಡಿದ ಪೋಕ್ಸೋ ಕೋರ್ಟ್ ಕ್ಲರ್ಕ್ !
ಪ್ರಕರಣ - 2 : 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಚಾಮರಾಜನಗರ ತಾಲೂಕಿನ ಗ್ರಾಮವೊಂದರ ನಾಗೇಶ್(23) ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ 2021 ರ ಸೆಪ್ಟಂಬರ್ 13 ರಂದು 12 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ, ತನ್ನ ಜೊತೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈತನ ವಿರುದ್ಧದ ಆರೋಪ ಸಾಕ್ಷಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷ ಕಠಿಣ ಶಿಕ್ಷೆ, 20 ಸಾವಿರ ದಂಡ ವಿಧಿಸಲಾಗಿದೆ. ಈ ಎರಡು ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಕೆ.ಯೋಗೇಶ್ ವಾದ ಮಂಡಿಸಿದ್ದರು.
ಇದನ್ನೂ ಓದಿ :ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ .. ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು
ಇನ್ನು ಬಾಲಕಿಗೆ ಮತ್ತು ಬರುವ ಔಷಧ ನೀಡಿ ಇಬ್ಬರು ಯುವಕರು ಅತ್ಯಾಚಾರ ಎಸಗಿರುವ ಘಟನೆ ಇತ್ತೀಚೆಗೆ ಸಾಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಗೆಳೆಯರೇ ಅತ್ಯಾಚಾರ ಎಸಗಿದ್ದಾರೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಶಾಬಾಸ್ (26), ಅಜಯ್ (32) ಎಂದು ಗುರುತಿಸಲಾಗಿದೆ. ಈ ಇಬ್ಬರು ಯುವಕರು ಬಾಲಕಿಯನ್ನು ಪುಸಲಾಯಿಸಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪಾನೀಯದಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ಅತ್ಯಾಚಾರ ನಡೆಸಿದ್ದಾರೆ. ಆಗಸ್ಟ್ 19 ರಂದು ಘಟನೆ ನಡೆದಿದೆ.
ಇದನ್ನೂ ಓದಿ :ಶಿವಮೊಗ್ಗ : ಅಪ್ರಾಪ್ತೆಗೆ ಮತ್ತು ಬರುವ ಔಷಧ ನೀಡಿ ಅತ್ಯಾಚಾರ, ಇಬ್ಬರ ವಿರುದ್ಧ ಪೋಕ್ಸೊ ಕೇಸ್