ಚಾಮರಾಜನಗರ: ಪ್ರತ್ಯೇಕ ಘಟನೆಗಳಲ್ಲಿ ಇಂದು 13 ವರ್ಷದ ಬಾಲಕ ವಿದ್ಯುತ್ ಅವಘಡದಲ್ಲಿ ಮೃತಪಟ್ಟರೆ, ಬೆಂಕಿ ಹಚ್ಚಿಕೊಂಡು ಬಾಲಕಿ ಮೃತಪಟ್ಟಿದ್ದಾಳೆ.
ತಾಲೂಕಿನ ಕೇತಹಳ್ಳಿ ಗ್ರಾಮದ ಮನೋಜ್ ಎಂಬಾತನಿಗೆ ವಿದ್ಯುತ್ ಪ್ರವಹಿಸಿ ಅಸುನೀಗಿದ್ದಾನೆ. ಜಮೀನಿನಲ್ಲಿ ತಂದೆ ಜೊತೆ ಕಾರ್ಯನಿರ್ವಹಿಸುತ್ತಿದ್ದಾಗ ಏಕಾಏಕಿ ವಿದ್ಯುತ್ ತಂತಿ ತುಂಡರಿಸಿ ಈತನ ಮೇಲೆ ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿ ಆತ್ಮಹತ್ಯೆ:ಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಮದ ಹೇಮಾ ಎಂಬುವರ ಮಗಳು ಪ್ರೀತಿ(13) ಎಂಬಾಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗ್ರಾಮದ ಮಹಿಳೆಯೊಬ್ಬರು ಪ್ರೀತಿಯನ್ನು ಹೀಯಾಳಿಸುವುದು, ನಿಂದಿಸುವುದು ಮಾಡುತ್ತಿದ್ದರು ಎನ್ನಲಾಗಿದೆ. ನಿಂದನೆಗೆ ಮನನೊಂದ ಪ್ರೀತಿ ಜು. 6ರಂದು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಳು.
ಇದನ್ನು ನೆರೆಹೊರೆಯವರು ಕಂಡು ಬೆಂಕಿ ಆರಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಸಂಬಂಧ ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.