ಚಾಮರಾಜನಗರ: ರೈಲ್ವೆ ನಿಲ್ದಾಣದಲ್ಲಿ, ರಸ್ತೆಬದಿ ಅರೆಬರೆ ಬಟ್ಟೆ ತೊಟ್ಟು ಓಡಾಡುವ ಮಾನಸಿಕ ಅಸ್ವಸ್ಥರನ್ನು ಕಂಡರೆ ಕೆಲವರಿಗೆ ಭಯ. ಹುಚ್ಚರೆಂದು ಕಲ್ಲು ಹೊಡೆಯುವವರೇ ಹೆಚ್ಚಿರುವ ಮೂಢರ ನಡುವೆ ಈ ಮನುಜ ಅವರಿಗೆ ಕ್ಷೌರ ಮಾಡಿ, ಸ್ನಾನ ಮಾಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.
ಮಾನಸಿಕ ಅಸ್ವಸ್ಥರಿಗೆ ಉಚಿತ ಸೇವೆ ನೀಡುತ್ತಿರುವ ವ್ಯಕ್ತಿ ಹೌದು, ಚಾಮರಾಜನಗರ ನಿವಾಸಿ ಎಲ್.ಸುರೇಶ್ ಎಂಬುವವರು ಹುಚ್ಚರನ್ನು ಕಂಡರೆ ಓಡುವುದಿಲ್ಲ. ಮಾನಸಿಕ ಅಸ್ವಸ್ಥರನ್ನು ನೋಡಿದಾಗ ಅಸಹ್ಯ ಪಡದೇ ಅವರನ್ನು ಸಂತೈಸಿ, ಸ್ನಾನ ಮಾಡಿಸುತ್ತಾರೆ. ಶುಭ್ರ ಬಟ್ಟೆ ತೊಡಿಸಿ ತಿಂಡಿ ಕೊಡಿಸುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ.
ಚಾಮರಾಜನಗರ ಗಡಿ ಭಾಗ ಮತ್ತು ರಾಜ್ಯದ ಕೊನೆಯ ರೈಲ್ವೆ ನಿಲ್ದಾಣವಾದ್ದರಿಂದ ಮಾನಸಿಕ ಅಸ್ವಸ್ಥರ ಓಡಾಟ ಹೆಚ್ಚು. ಕಳೆದ 12 ವರ್ಷದಿಂದ ಸುರೇಶ್ ಮಾನಸಿಕ ಅಸ್ವಸ್ಥರ ದಿನ, ಸ್ವಾತಂತ್ರ್ಯ ದಿನಾಚರಣೆ, ಗಣತಂತ್ರ ದಿನ ಹೀಗೆ ವಿಶೇಷ ದಿನಗಳಂದು ಮಾನಸಿಕ ಅಸ್ವಸ್ಥರನ್ನು ಹುಡುಕಿ ಅವರಿಗೆ ಸ್ನಾನ ಮಾಡಿಸಿ, ಹೊಸ ಬಟ್ಡೆ ತೊಡಿಸಿ, ವೈದ್ಯಕೀಯ ತಪಾಸಣೆಯನ್ನೂ ಮಾಡಿಸುತ್ತಾ ಬಂದಿದ್ದಾರೆ.
ಮನೆಯಿಂದ ಹೊರದೂಡಲ್ಪಟ್ಟ, ಸಮಾಜದಿಂದ ಕಡೆಗಣಿಸಲಾದ ಮಾನಸಿಕ ಅಸ್ವಸ್ಥರನ್ನು ಬಂಧುವಿನಂತೆ ಸತ್ಕರಿಸಿ ಉಪಚರಿಸುವ ಸುರೇಶ್, ಹಲವು ದಿನಗಳಿಂದ ಸ್ನಾನ ಮಾಡದೇ ಚರ್ಮ ರೋಗಳಿಗೆ ತುತ್ತಾಗಿರುವ ಮಾನಸಿಕ ರೋಗಿಗಳಿಗೆ ಔಷಧೋಪಚಾರವನ್ನು ಮಾಡುತ್ತಾರೆ.
ಮಾನಸಿಕ ಅಸ್ವಸ್ಥರ ಮೇಲೆ ತಿರಸ್ಕಾರದ ಭಾವನೆ ಇರುತ್ತೆ. ಅವರಿಗೆ ಪ್ರೀತಿ ತೋರುವುದಿಲ್ಲ, ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರಲು ಯಾರೂ ಪ್ರಯತ್ನಿಸುವುದಿಲ್ಲ. ಸ್ವಚ್ಛ ಭಾರತ ಆಂದೋಲನದಂತೆ ಮಾನಸಿಕ ಅಸ್ವಸ್ಥರನ್ನು ಗುಣಪಡಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಆಂದೋಲನವಾಗಬೇಕು. ಈ ದಿಸೆಯಲ್ಲಿ ಸುರೇಶ್ ನಮಗೆಲ್ಲಾ ಮಾದರಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಸಂಘದ ಯೋಗಗುರು ದಾನೇಶ್ವರಿ ಹೇಳುತ್ತಾರೆ.
ಮಾನಸಿಕ ಅಸ್ವಸ್ಥರು ಕೂಡಾ ಮನುಷ್ಯರೇ. ಅವರಿಗೆ 10-12 ವರ್ಷದಿಂದ ಕ್ಷೌರ ಮಾಡಿಸಿ, ಹೊಸ ಬಟ್ಟೆ ತೊಡಿಸುತ್ತೇನೆ. ಇವರಲ್ಲೇ ದೇವರನ್ನು ಕಾಣುತ್ತೇನೆ. ಬೀದಿಯಲ್ಲಿ ಸುತ್ತುವ ಮಾನಸಿಕ ಅಸ್ವಸ್ಥರನ್ನು ಸರ್ಕಾರ ನಿರಾಶ್ರಿತ ಕೇಂದ್ರಗಳಿಗೆ ಸೇರಿಸುವ ಕೆಲಸ ಮಾಡಬೇಕು ಎಂದು ಸುರೇಶ್ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಹುಚ್ಚುರು ಎಂದು ಕಲ್ಲು ಹೊಡೆಯುವವರ ನಡುವೆ ಅಂತಕರಣದಿಂದ ಮಾನಸಿಕ ಅಸ್ವಸ್ಥರನ್ನು ಕಾಣುವ ಸುರೇಶ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.