ಚಾಮರಾಜನಗರ :ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲೆಡೆ ಲಸಿಕೆ ಹಾಕಲಾಗುತ್ತಿದೆ. ಜಿಲ್ಲೆಯ 172 ಗ್ರಾಮಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೊದಲನೇ ಡೋಸ್ ಲಸಿಕೆ ಹಾಕಲಾಗಿದೆ. ಈ ಗ್ರಾಮಗಳಲ್ಲಿ ಶೇ.100ರ ಸಾಧನೆಯಾಗಿದೆ.
ಕೇರಳ ಹಾಗೂ ತಮಿಳುನಾಡಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ರಾಜ್ಯಗಳ ಗಡಿ ಅಂಚಿನಲ್ಲಿರುವ ಜಿಲ್ಲೆಯ 142 ಗ್ರಾಮಗಳಲ್ಲಿ ಮೊದಲನೇ ಡೋಸ್ ಲಸಿಕೆ ಪೂರ್ಣಗೊಳಿಸಲಾಗಿದೆ.
ಚಾಮರಾಜನಗರ ತಾಲೂಕಿನ ಬೇಡಗುಳಿ, ಕೂಡುಲೂರು, ಅರಕಲವಾಡಿ, ಬಿಸಲವಾಡಿ, ಗುಂಡ್ಲುಪೇಟೆ ತಾಲೂಕಿನ ಮಂಗಲ, ಕಗ್ಗಳದಹುಂಡಿ, ಕೊಳ್ಳೇಗಾಲ ತಾಲೂಕಿನ ಪಿ ಜಿ ಪಾಳ್ಯ, ಹನೂರು ತಾಲೂಕಿನ ಮೀಣ್ಯಂ, ಮಹದೇಶ್ವರ ಬೆಟ್ಟ ಸೇರಿ 9 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಗಡಿಯಂಚಿನಲ್ಲಿ ಈ ಗ್ರಾಮಗಳಿವೆ. ಸುಮಾರು 69,887 ಮಂದಿಗೆ ಶೇ.100ರಷ್ಟು ಲಸಿಕೆ ವಿತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ಕುರಿತು ಚಾಮರಾಜನಗರ ಡಿಹೆಚ್ಒ ಡಾ.ವಿಶ್ವೇಶ್ವರಯ್ಯ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ಗಡಿಯಂಚಲ್ಲದೆ ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿಯೂ ಶೇ.100ರಷ್ಟು ಲಸಿಕೆ ವಿತರಣೆ ಪ್ರಗತಿಯಾಗಿದೆ. ಹರವೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ 11 ಗ್ರಾಮಗಳ ಪೈಕಿ ನಾಲ್ಕು ಗ್ರಾಮಗಳಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಲಸಿಕೆ ಹಾಕಲಾಗಿದೆ. ಉಳಿದ 7 ಗ್ರಾಮಗಳಲ್ಲೂ ಉತ್ತಮ ಸಾಧನೆ ಆಗಿದೆ ಎಂದರು.