ಕರ್ನಾಟಕ

karnataka

ETV Bharat / state

ಬೆಂಗಳೂರು ದಕ್ಷಿಣದಲ್ಲಿ ಮೋದಿ ಸ್ಪರ್ಧಿಸಿದ್ರೆ ಅಖಾಡಕ್ಕಿಳಿತಾರಾ ಡಿಕೆಶಿ? - undefined

ಪ್ರಧಾನಿ ನರೇಂದ್ರ ಮೋದಿಯೇ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿದರೆ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಕಾಂಗ್ರೆಸ್‍ ತಯಾರಿ. ಮೋದಿಗೆ ಸೆಡ್ಡು ಹೊಡೆಯುವ ಶಕ್ತಿ ಡಿ.ಕೆ. ಶಿವಕುಮಾರ್​ಗೆ ಇದೆ ಎಂಬುದು ಕಾಂಗ್ರೆಸ್ ನಂಬಿಕೆ. ಮೋದಿಗೆ ಎದುರಾಳಿಯಾಗಿ ಡಿ.ಕೆ. ಶಿವಕುಮಾರ್​ರನ್ನು ಕಣಕ್ಕಿಳಿಸಲು ಸಕಲ ಸಿದ್ಧತೆ.

ಡಿ ಕೆ ಶಿವಕುಮಾರ್​ ಮತ್ತು ನರೇಂದ್ರ ಮೋದಿ

By

Published : Mar 24, 2019, 1:28 PM IST

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಾರೆ ಎನ್ನುವ ಮಾತು ಕೇಳಿಬರುತ್ತಿರುವ ಹಿನ್ನೆಲೆ ಅತ್ಯಂತ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಕಾಂಗ್ರೆಸ್‍ ತಯಾರಿ ನಡೆಸಿದೆ.

ಈ ಕಾರಣಕ್ಕಾಗಿಯೇ ಕಳೆದ ರಾತ್ರಿ ಬಿಡುಗಡೆ ಆಗಿರುವ ಕಾಂಗ್ರೆಸ್‍ ಅಭ್ಯರ್ಥಿಗಳ ಪಟ್ಟಿಯಲ್ಲಿ ಧಾರವಾಡ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಬಾಕಿ ಉಳಿಸಿಕೊಂಡು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಬಿಜೆಪಿ ನಿರ್ಧಾರ ಏನಿರಲಿದೆ ಎನ್ನುವುದನ್ನು ನೋಡಿಕೊಂಡು ಅಭ್ಯರ್ಥಿ ಹೆಸರು ಪ್ರಕಟಿಸಲು ಕಾಂಗ್ರೆಸ್ ನಿರ್ಧರಿಸಿದೆ. ಅದಕ್ಕಿಂತ ಮುಖ್ಯವಾಗಿ ಮೋದಿಯೇ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿದರೆ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‍ ಸಿದ್ಧತೆ ನಡೆಸಿದೆ.

ಕಾಂಗ್ರೆಸ್‍-ಜೆಡಿಎಸ್‍ ಎರಡೂ ಪಕ್ಷ ಒಪ್ಪುವ ಹಾಗೂ ಪ್ರಬಲ ಒಕ್ಕಲಿಗ ಸಮುದಾಯದ ನಾಯಕರನ್ನೇ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಸದ್ಯ ಸಚಿವ ಡಿ.ಕೆ. ಶಿವಕುಮಾರ್‍ ಹೊರತು ಬೇರೆ ಯಾರ ಹೆಸರು ಕಾಂಗ್ರೆಸ್‍ ನಾಯಕರ ಮುಂದೆ ಬಂದಿಲ್ಲ ಎನ್ನಲಾಗುತ್ತಿದೆ. ಇದರಿಂದ ಮೋದಿ ಬೆಂಗಳೂರಿಗೆ ಬಂದರೆ ಅದರಲ್ಲೂ ಬೆಂಗಳೂರು ದಕ್ಷಿಣದಿಂದ ಅಭ್ಯರ್ಥಿಯಾದರೆ ಅವರಿಗೆ ಎದುರಾಳಿಯಾಗಿ ಡಿ.ಕೆ. ಶಿವಕುಮಾರ್​ರನ್ನು ಕಣಕ್ಕಿಳಿಸಲು ಸಕಲ ತಯಾರಿ ಕೈಗೊಳ್ಳಲಾಗಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.

ಒಕ್ಕಲಿಗರೇ ನಿರ್ಣಾಯಕ:

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ನಿರ್ಣಾಯಕವಾಗಿರೋ ಹಿನ್ನೆಲೆ ಡಿಕೆಶಿ ಸೂಕ್ತ ಸ್ಪರ್ಧಿ ಎನ್ನಲಾಗುತ್ತಿದೆ. ಅಲ್ಲದೇ ಇದು ಬಿಜೆಪಿ ಭದ್ರಕೋಟೆಯಾಗಿರುವುದರಿಂದ ಯಾರನ್ನೋ ತಂದು ನಿಲ್ಲಿಸಿದರೆ ಎದುರಾಳಿ ಗೆಲುವು ಸುಲಭವಾಗಲಿದೆ ಎನ್ನುವ ಮಾತು ಕೂಡ ಇದೆ. ಆದ್ದರಿಂದ ತಕ್ಕಮಟ್ಟಿಗೆ ಬಿಜೆಪಿಗೆ ಎದುರೇಟು ನೀಡಬಲ್ಲ ಕಾಂಗ್ರೆಸ್ ಮುಖಂಡನನ್ನೇ ಅಖಾಡಕ್ಕಿಳಿಸಲು ಕೈ ಸಜ್ಜುಗೊಂಡಿದೆ. ಈ ನಿಟ್ಟಿನಲ್ಲಿ ಡಿಕೆಶಿಗೆ ರೆಡಿಯಾಗಿರುವಂತೆ ಕೈ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ನಾಮಪತ್ರ ಸಲ್ಲಿಸಲು ಬೇಕಾದ ಪ್ರಮಾಣಪತ್ರ ಸಿದ್ಧ ಮಾಡಿಕೊಳ್ಳುವಂತೆ ಡಿಕೆಶಿಗೆ ನಿನ್ನೆ ತಡ ರಾತ್ರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸೂಚನೆ ನೀಡಿದ್ದಾರೆ. ಮಾಜಿ ಸಚಿವರಾದ ರಾಮಲಿಂಗ ರೆಡ್ಡಿ, ಎಂ ಕೃಷ್ಣಪ್ಪಗಿಂತಲೂ ಡಿಕೆಶಿ ಸ್ಪರ್ಧಿಸಿದರೆ ಒಳಿತು ಅಂತ ಹೈಕಮಾಂಡ್ ತೀರ್ಮಾನಿಸಿದೆ. ಬೆಂಗಳೂರು ದಕ್ಷಿಣಕ್ಕೆ ಮೋದಿ ಬಂದ್ರೆ ಹೈವೋಲ್ಟೇಜ್ ಕ್ಷೇತ್ರವಾಗಲಿದೆ. ಇದರಿಂದ ನಾವು ಕೂಡ ಕಡಿಮೆ ಸಾಮರ್ಥ್ಯದ ಅಭ್ಯರ್ಥಿ ಕಣಕ್ಕಿಳಿಸುವುದು ಬೇಡ. ಅಲ್ಲದೇ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಸೆಡ್ಡು ಹೊಡೆದ ಹಾಗೂ ಹೊಡೆಯುವ ಶಕ್ತಿ ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಟ್ಟರೆ ಅದು ಡಿ.ಕೆ. ಶಿವಕುಮಾರ್​ಗೆ ಮಾತ್ರ ಇದೆ. ಬೆಂಗಳೂರು ನಗರದಲ್ಲಿ ಸಿದ್ದರಾಮಯ್ಯಗಿಂತ ಡಿಕೆಶಿ ಸೂಕ್ತ ಎಂಬ ನಿರ್ಧಾರಕ್ಕೆ ಕಾಂಗ್ರೆಸ್‍ ಬಂದಿದೆ.

ಧಾರವಾಡ ಏಕೆ ಬಾಕಿ?

ಇನ್ನೊಂದೆಡೆ ಹುಬ್ಬಳ್ಳಿ-ಧಾರವಾಡ ಕ್ಷೇತ್ರವನ್ನು ಕಾಂಗ್ರೆಸ್‍ ಬಾಕಿ ಉಳಿಸಿಕೊಂಡಿದೆ. ಇಲ್ಲಿ ಸದಾನಂದ ಡಂಗನವರ ಪರವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಟ್ಟು ಹಿಡಿದಿದ್ದಾರೆ. ಉಳಿದ ನಾಯಕರು ಶಾಕಿರ್ ಸನದಿ ಪರವಾಗಿ ಒಪ್ಪಿಗೆ ನೀಡಿದ್ದಾರೆ. ಅದೇ ಕಾರಣಕ್ಕೆ ಕ್ಷೇತ್ರದ ಅಭ್ಯರ್ಥಿ ಬಾಕಿ ಇಡಲಾಗಿದೆ ಎಂಬ ಮಾತಿದೆ.

For All Latest Updates

TAGGED:

ABOUT THE AUTHOR

...view details