ಬೆಂಗಳೂರು: ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾವು ರೆಸಾರ್ಟ್ಗೆ ಬಂದಿದ್ದೇವೆ. ಅವರ ಆದೇಶದಂತೆ ನಾವು ಇಲ್ಲಿ ಇರುತ್ತೇವೆ ಎಂದು ಜೆಡಿಎಸ್ ಶಾಸಕ ಡಾ.ಕೆ. ಅನ್ನದಾನಿ ಹೇಳಿದರು.
ದೇವನಹಳ್ಳಿಯಲ್ಲಿರುವ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಡ್ಯ ಜಿಲ್ಲೆಯ ಮಳವಳ್ಳಿ ಶಾಸಕ ಡಾ.ಕೆ. ಅನ್ನದಾನಿ, ನಮ್ಮನ್ನ ಯಾವುದೇ ಪಕ್ಷದ ಶಾಸಕರು ಸಂಪರ್ಕಿಸಿಲ್ಲ. ನಮಗೆ ಯಾರ ಹೆದರಿಕೆಯೂ ಇಲ್ಲ, ನಮ್ಮ ನಾಯಕರ ಹೇಳಿಕೆಯಂತೆ ನಾವು ಇಲ್ಲಿ ಇದ್ದೇವೆ. ಇನ್ನೂ ಎಷ್ಟು ದಿನ ಇರಬೇಕು ಅಂತಾ ಮಾಹಿತಿ ಇಲ್ಲ, ಸಿಎಂ ಹೇಳಿಕೆಗೆ ನಾವು ಬದ್ಧ. ಅವರು ಯಾವಾಗ ಹೊರಡಿ ಅಂತಾರೆ ಆಗ ನಾವೆಲ್ಲಾ ಹೊರಡುತ್ತೇವೆ ಎಂದು ತಿಳಿಸಿದರು.
ಮಳವಳ್ಳಿ ಶಾಸಕ ಡಾ.ಕೆ. ಅನ್ನದಾನಿ ರೆಸಾರ್ಟ್ ರಾಜಕಾರಣದಂತಹ ಪರಿಸ್ಥಿತಿ ಹೊಸದೇನಲ್ಲ, ಹೀಗೆ ಸುಮಾರು ಬಾರಿ ನಡೆದಿದೆ. ಕೆಲವು ಸಂದರ್ಭಗಳನ್ನು ಎದುರಿಸಲು ಈ ರೀತಿ ಸಂದರ್ಭಗಳು ಎದುರಾಗುತ್ತವೆ. ಈಗಿರುವ ಪರಿಸ್ಥಿತಿಯಲ್ಲಿ ನಾನು ರಾಜಕೀಯದ ಬಗ್ಗೆ ಏನು ಮಾತನಾಡಲ್ಲ. ಮುಖ್ಯಮಂತ್ರಿಗಳು ಮಾಧ್ಯಮದವರ ಬಳಿ ಏನೂ ಮಾಹಿತಿ ಹಂಚಿಕೊಳ್ಳಬೇಡಿ ಅಂತಾ ಹೇಳಿದ್ದಾರೆ ಎಂದರು.
ಮೊಬೈಲ್ ಸ್ವಿಚ್ ಆಫ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಸಂದರ್ಭದಲ್ಲಿ ಮೊಬೈಲ್ನಲ್ಲಿ ಮಾತಾಡುವುದು ಒಳ್ಳೆಯದ್ದೂ ಆಗುತ್ತೆ, ಕೆಟ್ಟದ್ದೂ ಆಗುತ್ತೆ. ಮೊಬೈಲ್ ಸ್ವಿಚ್ ಆಫ್ ಮಾಡಿರುವುದಕ್ಕೆ ಯಾರು ತಪ್ಪು ತಿಳಿದುಕೊಳ್ಳಬೇಡಿ. ನಮ್ಮ ಕ್ಷೇತ್ರದ ಮತದಾರರು ನಾನು ದೂರವಾಣಿ ಕರೆ ಸ್ವಿಕರಿಸುತ್ತಿಲ್ಲ ಅಂತಾ ಬೇಸರ ಮಾಡಿಕೊಳ್ಳಬೇಡಿ. ರಾಜಕಾರಣದ ಕೆಲವು ವ್ಯತ್ಯಾಸಗಳಿಂದ ಸಣ್ಣ ಪುಟ್ಟ ಸಮಸ್ಯೆಗಳು ಇರುವಂತಹದು ಸಹಜ. ಸರ್ಕಾರ ಏನು ಆಗಲ್ಲ, ಎಲ್ಲ ನಿಭಾಯಿಸುತ್ತಿದ್ದಾರೆ ಎಂದರು.