ಬೆಂಗಳೂರು:ಕಾಂಗ್ರೆಸ್ಸಿನ ಲಿಂಗಾಯತ ಮುಖಂಡರ ನಿಯೋಗ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿತು. ಈ ವೇಳೆ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಸೇರಿಸಬೇಕು ಎಂದು ಮನವಿ ಮಾಡಿದೆ.
ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ. ಪಾಟೀಲ್, ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮೇಯರ್ ಗಂಗಾಂಬಿಕೆ ಸೇರಿದಂತೆ ಸಮುದಾಯದ ಶಾಸಕರು, ಮುಖಂಡರು ನಿಯೋಗದಲ್ಲಿದ್ದರು. ಕೇಂದ್ರದ ಓಬಿಸಿ ಪಟ್ಟಿಯಲ್ಲಿ ವೀರಶೈವ-ಲಿಂಗಾಯತ ಸಮುದಾಯವನ್ನು ಸೇರಿಸಬೇಕು ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಸಿಎಂ ಮುಂದೆ ಕಾಂಗ್ರೆಸ್ನ ಲಿಂಗಾಯತ ಮುಖಂಡರು ಮನವಿ ಮಾಡಿದರು.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಎಂ.ಬಿ. ಪಾಟೀಲ್, ಲಿಂಗಾಯತ ಸಮಾಜದವರು ಮೂಲತಃ ಕೃಷಿಕರು. ನಮ್ಮ ಸಮಾಜದಲ್ಲಿ ಹಲವಾರು ಬಡವರಿದ್ದಾರೆ. ಬಡತನದಲ್ಲಿರುವ ವೀರಶೈವ ಲಿಂಗಾಯತರಿಗೆ ನಿಗಮ ಸ್ಥಾಪನೆ ಮಾಡಬೇಕೆಂದು ಮನವಿ ಮಾಡಿದ್ದೇವೆ ಎಂದು ಹೇಳಿದರು. ಲಿಂಗಾಯತರನ್ನು ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸಿದರೆ ಕೇಂದ್ರದ ಉದ್ಯೋಗಗಳು ಸೇರಿದಂತೆ ವಿವಿದೆಡೆ ಅನುಕೂಲ ಆಗುತ್ತದೆ. ಮೆರಿಟ್ ಆಧಾರದ ಮೇಲೆ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸುವುದಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಚೆನ್ನಪ್ಪ ರೆಡ್ಡಿ ಆಯೋಗದಲ್ಲಿ ಕೂಡ ಈ ಬಗ್ಗೆ ಶಿಫಾರಸು ಮಾಡಿದ್ದಾರೆ ಎಂದರು.
ಬಳಿಕ ಈಶ್ವರ ಖಂಡ್ರೆ ಮಾತನಾಡಿ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ ಮಾಡಿದ್ದೇವೆ. ಜೊತೆಗೆ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡುವುದಕ್ಕೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.