ಬೆಂಗಳೂರು:ಟಿಡಿಆರ್ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸಿಬಿ ಪೊಲೀಸರು ಹಲವೆಡೆ ದಾಳಿ, ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದು, ಆರೋಪಿಗಳ ವಿರುದ್ಧ FIR ದಾಖಲಿಸಿದ್ದಾರೆ.
ಟಿಡಿಆರ್ ಪ್ರಕರಣ: ಆರೋಪಿಗಳ ವಿರುದ್ಧ ಮತ್ತೊಂದು ದೂರು, FIR ದಾಖಲು
ಟಿಡಿಆರ್ ಪ್ರಕರಣದ ಆರೋಪಿಗಳ ವಿರುದ್ಧ ಈಗ ಮತ್ತೊಂದು ದೂರು ನೀಡಲಾಗಿದ್ದು, ನಿವೇಶನ ಗುಳುಂ ಮಾಡಿರುವ ಆರೋಪದ ಮೇಲೆ FIR ದಾಖಲಾಗಿದೆ.
ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಕಟ್ಟಡ ಮತ್ತು ನಿವೇಶನಕ್ಕೆ ಪರ್ಯಾಯವಾಗಿ ನೀಡುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ವಂಚನೆ ಆರೋಪ ಕುರಿತು ತನಿಖೆ ನಡೆಸುತ್ತಿರುವ ಎಸಿಬಿ ಪೊಲೀಸರು, ಇಲ್ಲಿಯವರೆಗೆ ದೇವರಾಜ್, ಕೃಷ್ಣಲಾಲ್, ಸುರೇಂದ್ರನಾಥ್, ರಥನ್ ಲಾತ್, ಅಮಿತ್ ಬೊಲಾರ, ಗೌತಮ್ ಎಂಬ ಆರೋಪಿಗಳನ್ನು ಪತ್ತೆ ಮಾಡಿ, ಇವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಹಲವಾರು ಅಕ್ರಮಗಳನ್ನು ಪತ್ತೆ ಹಚ್ಚಿದ್ದಾರೆ.
ಈ ಆರೋಪಿಗಳ ಮೇಲೆ ರಾಜೇಶ್ ಎಂಬುವವರು ಎಸಿಬಿಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಈ ಆರೋಪಿಗಳು ರಾಮಮೂರ್ತಿ ನಗರದ ಬಳಿ ಇರುವ 30 ಸಾವಿರ ಮೀ. ಜಾಗವನ್ನು ಗುಳುಂ ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಎಸಿಬಿ ತನಿಖೆಯಲ್ಲಿ ಈ ಆರೋಪಿಗಳು ಸಿಲಿಕಾನ್ ಸಿಟಿಯ ಹಲವೆಡೆ ಈ ರೀತಿ ಸೈಟ್ ಗುಳುಂ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಇದಕ್ಕೆ ಬೇಕಾದ ದಾಖಲೆಗಳನ್ನು ರೆಡಿ ಮಾಡಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲು ಎಸಿಬಿ ನಿರ್ಧಾರ ಮಾಡಿದೆ ಎನ್ನಲಾಗಿದೆ.