ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಕುರಿತು ಸುಪ್ರೀಂಕೋರ್ಟ್ ಇಂದು ನೀಡಿದ ಮಧ್ಯಂತರ ತೀರ್ಪಿನಿಂದ ದೋಸ್ತಿ ಪಕ್ಷಗಳಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.
ನ್ಯಾಯಾಲಯದಲ್ಲಿ ಬಂಡಾಯ ಶಾಸಕರಿಗೆ ಕಪಾಳ ಮೋಕ್ಷವಾಗಲಿದೆ, ಶಾಸಕರನ್ನು ಅನರ್ಹಗೊಳಿಸುವುದಕ್ಕೆ ಅವಕಾಶ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ರಾಜೀನಾಮೆ ಬಗ್ಗೆ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳಬೇಕು. ಅಲ್ಲಿಯ ತನಕ ರಾಜೀನಾಮೆ ನೀಡಿದ ಶಾಸಕರು ಅಧಿವೇಶನಕ್ಕೆ ಹಾಜರಾಗುವ ಬಗ್ಗೆ ಒತ್ತಡ ಹಾಕುವಂತಿಲ್ಲ ಎಂದು ಹೇಳಿರುವುದು ಆಡಳಿತ ಪಕ್ಷದವರಿಗೆ ಆತಂಕ ಮೂಡಿಸಿದೆ.
ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದು, ಈ ಸಂದರ್ಭದಲ್ಲಿ ಬಂಡಾಯ ಶಾಸಕರು ಸದನಕ್ಕೆ ಹಾಜರಾಗಿ ವಿಪ್ಗೆ ಹೆದರಿ ಸರ್ಕಾರದ ಪರವಾಗಿ ಮತ ಚಲಾಯಿಸಿದರೆ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸುವ ಅವಕಾಶ ಹೆಚ್ಚಿತ್ತು. ಆದರೆ ಅತೃಪ್ತರು ತಾವು ಸದನಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇದರಿಂದ ಆಡಳಿತ ಪಕ್ಷಗಳಲ್ಲಿ ಆತಂಕ ಮನೆ ಮಾಡಿದೆ.
ಸ್ಪೀಕರ್ ಅವರು ಬಂಡಾಯ ಶಾಸಕರ ರಾಜೀನಾಮೆ ಅಂಗೀಕರಿಸಿದರೆ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸಂಖ್ಯಾಬಲ ಕುಸಿದು ಅಲ್ಪಮತಕ್ಕೆ ಬರಲಿದೆ. ಇಂತಹ ಸಂದರ್ಭದಲ್ಲಿ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವುದು ಕಷ್ಟಕರವಾಗಿದೆ. ಸ್ಪೀಕರ್ ಅವರು ರಾಜೀನಾಮೆ ನೀಡಿದ ಶಾಸಕರನ್ನು ಕಾಂಗ್ರೆಸ್ ಪಕ್ಷದ ದೂರು ಆಧರಿಸಿ ಒಂದು ವೇಳೆ ಅನರ್ಹಗೊಳಿಸಿದರೂ ಅದಕ್ಕೆ ಹೆಚ್ವಿನ ಕಾಲಾವಕಾಶ ಇಲ್ಲದಿರುವುದರಿಂದ ಆ ಸಾಧ್ಯತೆ ತೀರಾ ಕಡಿಮೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.