ಬೆಂಗಳೂರು: ರಕ್ಷಾ ಫೌಂಡೇಷನ್ ಕಳೆದ 8 ವರ್ಷಗಳಿಂದ ಸಾಮಾಜಿಕ ಕಳಕಳಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಾ ಬಂದಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರಿ ಹಾಗೂ ಸರ್ಕಾರಿ ಮಾನ್ಯತೆ ಪಡೆದ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸುತ್ತಿದೆ.
ರಕ್ಷಾ ಫೌಂಡೇಷನ್ ವತಿಯಿಂದ ನೋಟ್ ಬುಕ್ ವಿತರಣೆ ವಿಕಲಚೇತನ ಹಾಗೂ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, 30 ಸರ್ಕಾರಿ ಹಾಗೂ ಸರ್ಕಾರಿ ಮಾನ್ಯತೆ ಪಡೆದ ಶಾಲೆಗಳಿಗೆ ಗಡಿಯಾರ ಹಾಗೂ ಐವತ್ತು ಮಕ್ಕಳಿಗೆ ಸೈಕಲ್ ವಿತರಿಸಲಾಯಿತು. ಜೊತೆಗೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮತ್ತು ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 10,000 ವಿದ್ಯಾರ್ಥಿಗಳಿಗೆ 1,00,000 ಉಚಿತ ಪುಸ್ತಕಗಳು, ಮತ್ತಿತರ ಸೌಲಭ್ಯಗಳನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಸುಧಾಮೂರ್ತಿ, ಉತ್ತಮ ಶಿಕ್ಷಣ ಉತ್ತಮ ಪುಸ್ತಕಗಳಿಂದ ಬರುವುದಿಲ್ಲ. ಉತ್ತಮ ಬೋಧನೆಯಿಂದಲೂ ಸಿಗುವುದಿಲ್ಲ. ಉತ್ತಮರಾಗಬೇಕು ಎನ್ನುವ ತುಡಿತ ನಮ್ಮ ಮನಸ್ಸಿನಲ್ಲಿರಬೇಕು. ಮನಸ್ಸು ಎನ್ನುವುದು ಕುದುರೆ ಇದ್ದಂತೆ. ಅದಕ್ಕೆ ಲಗಾಮು ಹಾಕಿದರೆ ಮಾತ್ರ ನಿಯಂತ್ರಣಕ್ಕೆ ಬರುತ್ತದೆ. ಅದೇ ರೀತಿ ನಿರಂತರ ಬರವಣಿಗೆ, ಓದಿನಿಂದ ಯಶಸ್ಸು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಹಿರಿಯರು, ಶಿಕ್ಷಕರಿಗೆ ಗೌರವ ನೀಡಬೇಕು. ಉತ್ತಮ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ಜಾತಿ, ಮತ, ಪಂಥಗಳನ್ನು ದಾಟಿ ವಿದ್ಯಾರ್ಥಿ ಸಮುದಾಯ ಮುನ್ನಡೆಯಬೇಕು. ದೃಢವಾದ ಮನಸ್ಸಿದ್ದರೆ, ಸದೃಢವಾದ ದೇಶಕಟ್ಟಲು ಸಾಧ್ಯ ಎಂದು ಹೇಳಿದರು.
ಸಮಾರಂಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಜಯನಗರ ಶಾಸಕಿ ಸೌಮ್ಯ ರೆಡ್ಡಿ , ಇನ್ಪೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸಮಾಜ ಸೇವಕಿ ಡಾ.ಸುಧಾಮೂರ್ತಿ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಂಸದರಾದ ತೇಜಸ್ವಿ ಸೂರ್ಯ, ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ, ಹಾಗೂ ಬಿಬಿಎಂಪಿ ಸದಸ್ಯರಾದ ಹೆಚ್ .ಸಿ ನಾಗರತ್ನ ರಾಮಮೂರ್ತಿ, ಎನ್ ನಾಗರಾಜ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.