ಆನೇಕಲ್: ಎರಡು ದಶಕಗಳಿಗೂ ಹೆಚ್ಚು ಕಾಲ ಬೀದಿ ಬದಿ ತಿಂಡಿ, ಆಹಾರ ತರಕಾರಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದ ನೂರಾರು ವ್ಯಾಪಾರಿಗಳು ಈಗ ನಡುಬೀದಿಗೆ ಬಿದ್ದಿದ್ದಾರೆ.
ಫುಟ್ಪಾತ್ ವ್ಯಾಪಾರಿಗಳ ತೆರವು... ಬೀದಿಗೆ ಬಿದ್ದು ಕಣ್ಣೀರು ಹಾಕಿದ ಬಡಪಾಯಿಗಳು - undefined
ರಸ್ತೆ ಅಭಿವೃದ್ದಿ ನೆಪದಲ್ಲಿ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಾಭಿವೃದ್ದಿ ಒಕ್ಕೂಟವು ತೆರವುಗೊಳಿಸಿದೆ. ಹೀಗಾಗಿ ಬೀದಿಗೆ ಬಿದ್ದಿರುವ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು. ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಬಿಐಎ ಅಧ್ಯಕ್ಷರು ಭರವಸೆ ನೀಡಿದ್ದಾರೆ.
ರಸ್ತೆ ಅಭಿವೃದ್ಧಿ ಹೆಸರಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿರುವ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಾಭಿವೃದ್ಧಿ ಒಕ್ಕೂಟದ ವಿರುದ್ಧ ನೊಂದ ವ್ಯಾಪಾರಿಗಳು ರೊಚ್ಚಿಗೆದ್ದಿದ್ದಾರೆ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆ ಬದಿ ವ್ಯಾಪಾರ ಮಾಡಿಕೊಂಡಿದ್ದ ಸಣ್ಣ ವ್ಯಾಪಾರಿಗಳಿಗೆ ಮುನ್ಸೂಚನೆ ನೀಡದೆ ಜೆಸಿಬಿಗಳ ಮೂಲಕ ಅಂಗಡಿಗಳನ್ನು ತೆರವುಗೊಳಿಸಿ, ಅಂಗಡಿ, ಪಾತ್ರೆ, ಸರಕುಗಳನ್ನು ಬೀದಿಗೆ ಕೆಡವಿ, ಮರಳಿ ಉಪಯೋಗಕ್ಕೆ ಬಾರದಂತೆ ನಜ್ಜುಗುಜ್ಜು ಮಾಡಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ಅಲ್ಲದೆ ನಮಗಿನ್ನು ಯಾರೂ ದಿಕ್ಕು ಎಂದು ಕಣ್ಣೀರು ಹಾಕಿದ ದೃಶ್ಯ ಮನಕಲಕುವಂತಿತ್ತು.
ತಿರುಪಾಳ್ಯದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ಬೀದಿ ಬದಿ ವ್ಯಾಪಾರಿಗಳು ಹೆಬ್ಬಗೋಡಿ ಪೊಲೀಸ್ ಠಾಣೆ ಮುಂದೆ ಸೇರಿ ನ್ಯಾಯಕ್ಕಾಗಿ ಆಗ್ರಹಿಸಿದರು. ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾ ಅಸೋಸಿಯೇಷನ್ (ಬಿಐಎ) ವಿರುದ್ಧ ದೂರು ನೀಡಿದರು. ಅನಂತರ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಾಭಿವೃದ್ದಿ ಒಕ್ಕೂಟದ ಅಧ‍್ಯಕ್ಷ ಪ್ರಸಾದ್ ಸ್ಥಳಕ್ಕಾಗಮಿಸಿ ಒಂದು ತಿಂಗಳ ಅವಧಿಯಲ್ಲಿ 120 ಪೆಟ್ಟಿ ಅಂಗಡಿಗಳನ್ನು ಆಯ್ದ ವ್ಯಾಪಾರಿಗಳಿಗೆ ನೀಡಲಾಗುವುದು. ಜೊತೆಗೆ ಜಾಕಿ ಕಾರ್ಖಾನೆ ಮುಂದೆ ತಾತ್ಕಾಲಿಕವಾಗಿ ತರಕಾರಿ ವ್ಯಾಪಾರಿಗಳಿಗೆ ವ್ಯವಸ್ಥೆ ಮಾಡಿಕೊಡಲಾಗುವುದೆಂದು ಭರವಸೆ ನೀಡಿದರು.