ಬೆಂಗಳೂರು: ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಿಷೇಧಿಸಿ ಮೂರು ವರ್ಷ ಕಳೆದರೂ ಇಂದಿಗೂ ಸಾವಿರಾರು ಪಿಒಪಿ ಮೂರ್ತಿಗಳು ಸದ್ದಿಲ್ಲದೇ ತಯಾರಾಗುತ್ತಿವೆ. ಈ ಬಗ್ಗೆ ಪರಿಸರ ಪ್ರೇಮಿಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಸ್ವಯಂ ಸೇವಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪಿಒಪಿ ಮೂರ್ತಿಗಳ ಕಡಿವಾಣಕ್ಕೆ ಮುಂದಾಗದೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಬೆಂಗಳೂರು ಹೊರವಲಯದ ಕುಂಬಳಗೋಡಿನಲ್ಲಿ ನಾಲ್ಕು ಎಕರೆಯಷ್ಟಿರುವ ಎರಡು ಯುನಿಟ್ನಲ್ಲಿ ಸಾವಿರಾರು ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಯೂನಿಟ್ ಹೊರಗೆ ಕೆಎಸ್‌ಪಿಸಿಬಿ ಆದೇಶ ಪಾಲಿಸಲಾಗಿದೆ. ಪಿಒಪಿ ಗಣೇಶ ತಯಾರಿಸುತ್ತಿಲ್ಲ ಎಂದು ನಾಮಫಲಕ ಹಾಕಿದ್ದಾರೆ. ಆದರೆ, ಒಳಗೆ ನಡೆಯುತ್ತಿರುವ ಕಥೆಯೇ ಬೇರೆ. ಬ್ಯಾನ್ ಆಗಿರುವ ಪಿಒಪಿ ಮೂರ್ತಿಗಳನ್ನು ರಾಜಾರೋಷವಾಗಿ ತಯಾರಿಸುತ್ತಿದ್ದಾರೆ. ಈ ಬಗ್ಗೆ ಕೆಎಸ್‌ಪಿಸಿಬಿ ಹಾಗೂ ಬಿಬಿಎಂಪಿಗೆ ವೀಡಿಯೋ ಸಹಿತ, ಪತ್ರದ ಮುಖೇನ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಪರಿಸರ ಎನ್ಜಿಒ ಸ್ಥಾಪಕ ಗುರುಮೂರ್ತಾಚಾರ್ ತಿಳಿಸಿದರು.