ಕರ್ನಾಟಕ

karnataka

ETV Bharat / state

ಮಂಡ್ಯ ಅತೃಪ್ತ ಕೈ ನಾಯಕರ ಮನವೊಲಿಕೆಗೆ ಸಭೆ ಕರೆದ ಸಿದ್ದರಾಮಯ್ಯ

ಮಂಡ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ನಡುವೆ ಸಾಮರಸ್ಯ ಮೂಡಿಸಲು ಸಭೆ ಕರೆದ ಸಿದ್ದರಾಮಯ್ಯ. ಅತೃಪ್ತ ನಾಯಕರ ಮನವೊಲಿಕೆ ಕಸರತ್ತು. ನಿಖಿಲ್ ಪರ ಪ್ರಚಾರ ಕೈಗೊಳ್ಳುವಂತೆ ಕೊನೆಯ ಅಸ್ತ್ರ ಪ್ರಯೋಗಿಸಲಿರುವ ಸಿದ್ದರಾಮಯ್ಯ.

ಸಂಗ್ರಹ ಚಿತ್ರ: ಸಿದ್ದರಾಮಯ್ಯ

By

Published : Apr 7, 2019, 6:52 AM IST

ಬೆಂಗಳೂರು: ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡದಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ನಡುವೆ ಸಾಮರಸ್ಯ ಮೂಡಿಸಲು ಭಾನುವಾರ ಮಂಡ್ಯ ಕೈ ನಾಯಕರ ಸಭೆ ಕರೆದಿದ್ದಾರೆ.

ಇಲ್ಲಿಯವರೆಗೆ ಪ್ರತಿಷ್ಟೆಗೆ ಬಿದ್ದು ಸ್ವಲ್ಪ ಬಿಗುವಿನಿಂದಲೇ ಇದ್ದ ದೋಸ್ತಿ ನಾಯಕರು ಈಗ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲು ಕಾಂಗ್ರೆಸ್ ಸಹಕಾರ ಬೇಕು ಹಾಗೆಯೇ ಮೈಸೂರಲ್ಲಿ ಕಾಂಗ್ರೆಸ್‌ನ ವಿಜಯಶಂಕರ್ ವಿಜಯಿಯಾಗಲು ಜೆಡಿಎಸ್ ನಾಯಕರ ನೆರವು ಅಗತ್ಯವೆನ್ನುವುದನ್ನು ಮನಗಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅತೃಪ್ತ ಮುಖಂಡರ ಮನವೊಲಿಕೆಗೆ ಹಿರಿಯ ನಾಯಕರು ಮುಂದಾಗಿದ್ದಾರೆ.

ಮೈತ್ರಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲು ಸಿದ್ಧರಿಲ್ಲದ ನಾಯಕರು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೊನೆಯ ಪ್ರಯತ್ನವಾಗಿ ಅತೃಪ್ತರಾದ ಮಾಜಿ ಸಚಿವ ಚೆಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆಯನ್ನ ತಮ್ಮ ಕಾವೇರಿ ನಿವಾಸದಲ್ಲಿ ಕರೆದಿದ್ದಾರೆ. ಈ ಸಭೆಯಲ್ಲಿ ಮಂಡ್ಯದಲ್ಲಿ ನಿಖಿಲ್ ಪರವಾಗಿ ಕಾಂಗ್ರೆಸ್ ಮುಖಂಡರು ಚುನಾವಣೆ ಪ್ರಚಾರ ನಡೆಸುವ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ.

ಸಿಎಂ ಕುಮಾರಸ್ವಾಮಿ ಹಾಜರಾತಿ ಅನುಮಾನ :

ಮನವೊಲಿಕೆಗೆ ಕರೆಯಾಲಾಗಿರುವ ಸಭೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಹಾಜರಿರಬೇಕು ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಪಟ್ಟು ಹಿಡಿದಿದ್ದಾರೆ. ಕುಮಾರಸ್ವಾಮಿ ಅವರು ನಿಖಿಲ್ ಪರ ಪ್ರಚಾರ ಮಾಡಲು ತಮ್ಮ ಬಳಿ ಕೇಳಲಿ ಎಂದು ಮಂಡ್ಯದ ಅತೃಪ್ತ ಕಾಂಗ್ರೆಸ್ ಮುಖಂಡರು ಪಟ್ಡು ಹಿಡಿದಿದ್ದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ.

ಸಿಎಂ ಕುಮಾರಸ್ವಾಮಿ ಅವರು ಚೆಲುವರಾಯಸ್ವಾಮಿ, ರಮೇಶ ಬಂಡಿಸಿದ್ದೇಗೌಡ ಜತೆ ಒಟ್ಟಿಗೆ ಕುಳಿತು ಮಾತನಾಡಲು ಒಲವು ತೋರಿಸುತ್ತಿಲ್ಲ. ಇಬ್ಬರೂ ಈ ವಿಷಯವನ್ನ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು, ಸಿದ್ದರಾಮಯ್ಯ ಅವರು ಕರೆದ ಸಭೆಗೆ ಕುಮಾರಸ್ವಾಮಿ ಆಗಮಿಸುವುದು ಸಹ ಅನುಮಾನವಾಗಿದೆ. ಚೆಲುವರಾಯಸ್ವಾಮಿ ಮತ್ತು ಕುಮಾರಸ್ವಾಮಿ ನಡುವಿನ ಭಿನ್ನಾಭಿಪ್ರಾಯ ಹೋಗಲಾಡಿಸಲು ಸಿದ್ದರಾಮಯ್ಯ ಬಹಳಷ್ಟು ಶ್ರಮಿಸಬೇಕಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿ ಗೆಲುವಿಗಾಗಿ ಶುಕ್ರವಾರ ದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಜಂಟಿಯಾಗಿ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಈ ಬೆಳವಣಿಗೆ ನಂತರ ಮನಸ್ತಾಪ ಬದಿಗಿಟ್ಟು ಎರಡೂ ಪಕ್ಷಗಳ ನಾಯಕರು ಒಟ್ಟಿಗೆ ಪ್ರಚಾರ ನಡೆಸುವ ಒಮ್ಮತಕ್ಕೆ ಬಂದಿದ್ದಾರೆ.

ಮಂಡ್ಯದಲ್ಲಿ ನಿಖಿಲ್ ಪರ ಮಾಜಿ ಸಿಎಂ ಸಿದ್ದರಾಮಯ್ಯನವರೂ ಸಹ ಪ್ರಚಾರ ನಡೆಸಲಿದ್ದಾರೆ. ಅದರಂತೆ ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ ಪರ ಮಾಜಿ ಪ್ರಧಾನಿ ದೇವೇಗೌಡರು ಸಹ ಚುನಾವಣೆ ಪ್ರಚಾರ ನಡೆಸುವ ಸಂಭವ ಇದೆ.

ಮೈಸೂರಿನಲ್ಲಿ ಅಸಹಕಾರ ನೀಡುತ್ತಿರುವ ಸಚಿವ ಜಿ.ಟಿ ದೇವೇಗೌಡ ಜತೆ ಸಿದ್ದರಾಮಯ್ಯ ಸಹ ದೂರವಾಣಿಯಲ್ಲಿ ಮಾತನಾಡಿ ಮನಸ್ತಾಪ ದೂರ ಮಾಡುವ ಪ್ರಯತ್ನ ನಡೆಸಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರ ಅತೃಪ್ತಿ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಸೋತರೆ ಅದರ ಅಪವಾದ ಅವರ ಮೈ ಮೇಲೆ ಬರುತ್ತದೆ. ಹಾಗೆಯೇ ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ ಗೆಲ್ಲಬೇಕೆಂದರೆ ಜೆಡಿಎಸ್ ಮುಖಂಡರಾದ ಸಚಿವ ಜಿ‌ಟಿ ದೇವೇಗೌಡ, ಜೆಡಿಎಸ್ ರಾಜ್ಯ ಅಧ್ಯಕ್ಷ ಹೆಚ್.ವಿಶ್ವನಾಥ್ ನೆರವು ಪಡೆಯಲು ಸಿದ್ದರಾಮಯ್ಯನವರು ಚೆಲುವರಾಯಸ್ವಾಮಿ - ಕುಮಾರಸ್ವಾಮಿ ನಡುವಿನ ಮನಸ್ತಾಪ ತಿಳಿಗೊಳಿಸುವುದು ಅನಿವಾರ್ಯವಾಗಿದೆ.

ABOUT THE AUTHOR

...view details