ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಕೊಳ್ಳಲು ಡಿ.ವಿ.ಸದಾನಂದಗೌಡ ಸೇರಿ ರಾಜ್ಯದ ಒಟ್ಟು ನಾಲ್ವರಿಗೆ ಅಧಿಕೃತ ಆಹ್ವಾನ ಬಂದಿದೆ. ಸಂಜೆ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇವರೆಲ್ಲಾ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಆಯ್ಕೆಯಾಗಿರುವ ಡಿ.ವಿ.ಸದಾನಂದಗೌಡರನ್ನು ಮತ್ತೊಮ್ಮೆ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಈ ಬಗ್ಗೆ ದೂರವಾಣಿ ಕರೆ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ದರಾಗಿ ಎಂದು ಮಾಹಿತಿ ನೀಡಿದ್ದಾರೆ. ಮೋದಿ ಅವರ ಸಂಪುಟದಲ್ಲಿ ಈಗಾಗಲೇ 5 ವರ್ಷ, ಎರಡು-ಮೂರು ಖಾತೆ ನಿರ್ವಹಿಸಿರುವ ಅನುಭವ ಇರುವ ಜೊತೆಗೆ ರಾಜ್ಯ ಹಾಗೂ ಕೇಂದ್ರದ ನಡುವೆ ಈ ಹಿಂದೆ ಅನಂತ್ ಕುಮಾರ್ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು. ಈಗ ಅವರ ಜಾಗವನ್ನು ಸದಾನಂದಗೌಡ ತುಂಬಲಿದ್ದಾರೆ ಎನ್ನುವ ಕಾರಣಕ್ಕೆ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಸಚಿವರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಆಹ್ವಾನ ಬಂದಿರುವ ಮಾಹಿತಿಯನ್ನು ಸ್ವತಃ ಡಿ.ವಿ.ಸದಾನಂದಗೌಡರೇ ಖಚಿತಪಡಿಸಿದ್ದಾರೆ. ದೂರವಾಣಿ ಮೂಲಕ ಮಾತನಾಡಿದ ಅವರು, ಅಮಿತ್ ಶಾ ಅವರಿಂದ ಕರೆ ಬಂತು, 5 ಗಂಟೆಗೆ ಮೋದಿ ಅವರ ಮನೆಗ ಬನ್ನಿ, ಸಂಜೆ 7 ಗಂಟೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಎನ್ನುವ ಸಂದೇಶ ಬಂದಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾರ ನಿರ್ಧಾರ ನನ್ನ ಮನಸ್ಸಿಗೆ ನೆಮ್ಮದಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.